ತುಮಕೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (DHO) ಕಚೇರಿಯ ಲೆಕ್ಕಪತ್ರ ವಿಭಾಗದ ವ್ಯವಸ್ಥಾಪಕ ಎಂ.ಎಚ್. ಅರವಿಂದ್ ಅವರು ₹12,000 ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತಿಪಟೂರಿನ ಡಾ. ಬಿ.ಆರ್. ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ರಾಜಶೇಖರ್ ಅವರು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಜಿಲ್ಲೆಯ 10 ತಾಲ್ಲೂಕುಗಳ ಜಾತ್ರೆ ಮತ್ತು ಸಂತೆಗಳಲ್ಲಿ ಆರೋಗ್ಯ ಅರಿವು ಮೂಡಿಸುವ ವಸ್ತುಪ್ರದರ್ಶನ ನಡೆಸಿಕೊಟ್ಟಿದ್ದರು. ಈ ಕೆಲಸಕ್ಕೆ ಸಂಬಂಧಿಸಿದ ₹1.98 ಲಕ್ಷ ಬಿಲ್ ಪಾವತಿ ಮಾಡಲು ವ್ಯವಸ್ಥಾಪಕ ಅರವಿಂದ್ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಬಿಲ್ ಹಣ ಬಿಡುಗಡೆ ಮಾಡಲು ಅರವಿಂದ್ ಅವರು ಲಂಚದ ಹಣ ನೀಡುವಂತೆ ರಾಜಶೇಖರ್ ಅವರ ಮೇಲೆ ಒತ್ತಡ ಹೇರಿದ್ದರು. ಇದರಿಂದ ಬೇಸತ್ತ ರಾಜಶೇಖರ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಬುಧವಾರ ಸಂಜೆ ಡಿಎಚ್ ಒ ಕಚೇರಿಯ ಆವರಣದಲ್ಲೇ ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಅರವಿಂದ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎ.ವಿ.ಲಕ್ಷ್ಮಿನಾರಾಯಣ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿಗಳಾದ ಕೆ.ಎಂ. ಸಂತೋಷ್, ಎಂ. ಮಂಜುನಾಥ್ ಹಾಗೂ ಇನ್‌ಸ್ಪೆಕ್ಟರ್‌ಗಳಾದ ಟಿ. ರಾಜು ಮತ್ತು ಬಿ. ಮೊಹಮ್ಮದ್ ಸಲೀಂ ಅವರ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಬಂಧಿತ ಆರೋಪಿಯ ವಿಚಾರಣೆ ಮುಂದುವರಿದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


