ತುಮಕೂರು: ರಾಜ್ಯ ಸರ್ಕಾರ ಮಾ.27 ರಂದು ಸಚಿವ ಸಂಪುಟದ ಸಭೆ ನಡೆಸಿ, ಒಳಮೀಸಲಾತಿಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಿ, ಜಾರಿ ಮಾಡುವ ಭರವಸೆ ನೀಡಿತ್ತು. ಆದರೆ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನೆಪದಲ್ಲಿ ಸಭೆಯನ್ನು ಮುಂದೂಡುವ ಮೂಲಕ ಮಾದಿಗ ಸಮುದಾಯದ ತಾಳ್ಮೆ ಪರೀಕ್ಷಿಸುತ್ತಿದೆ ಎಂದು ದಸಂಸ ಜಿಲ್ಲಾಧ್ಯಕ್ಷ ಪಿ.ಎನ್. ರಾಮಯ್ಯ ಅವರು ಸರ್ಕಾರದ ವಿರುದ್ಧ ಕಿಡಿಕಾರಿದರು.
ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ತೋರಿಸಿರುವ ನಿರ್ಲಕ್ಷ್ಯವನ್ನು ಖಂಡಿಸಿ, ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಶನಿವಾರ ದಸಂಸ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಅವರ ಅಧ್ಯಕ್ಷತೆಯನ್ನು ನಗರದ ಎಂ.ಜಿ.ರಸ್ತೆಯ ಅಂಬೇಡ್ಕರ್ ಭವನದಲ್ಲಿ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಸುಪ್ರೀಂ ಕೋರ್ಟಿನ ಆದೇಶಕ್ಕೂ ಬೆಲೆ ಇಲ್ಲದಂತಾಗಿದೆ. ತಾವೇ ಬೊಕ್ಕಸದಿಂದ ನೂರಾರು ಕೋಟಿ ರೂ ಖರ್ಚು ಮಾಡಿ ಪಡೆದ ನ್ಯಾ.ನಾಗಮೋಹನದಾಸ್ ವರದಿಗೂ ಸರ್ಕಾರಕ್ಕೆ ನಂಬಿಕೆ ಇಲ್ಲದಂತಾಗಿದೆ. ವಿಧಾನಪರಿಷತ್ ಮತ್ತು ವಿಧಾನಸಭೆಯಲ್ಲಿ ಅಂಗೀಕಾರವಾಗಿ, ರಾಜ್ಯಪಾಲರ ಅಂಕಿತ ಬಿದ್ದರೂ ಒಳಮೀಸಲಾತಿ ಜಾರಿಗೆ ಕಂಟಕ ತಪ್ಪಿಲ್ಲ. ಹಾಗಾಗಿ ರಾಜ್ಯ ಸರ್ಕಾರಕ್ಕೆ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ಹಾಗೂ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ಜಯಂತಿ ಆಚರಿಸುವ ಯಾವುದೇ ನೈತಿಕ ಹಕ್ಕು ಇಲ್ಲ ಎಂದರು.
ಕಳೆದ ಮೂವತ್ತೈದು ವರ್ಷಗಳಿಂದ ಮಾದಿಗರ ಒಳಮೀಸಲಾತಿಗಾಗಿ ನಿರಂತರ ಹೋರಾಟ ಮಾಡುತ್ತಾ ಬಂದಿದ್ದರೂ ನಿರ್ಲಕ್ಷಿಸಿರುವ ಸರ್ಕಾರ, ಕೆಲ ಸಮುದಾಯಗಳ ಹೋರಾಟಕ್ಕೆ ಮಣಿದು ಒಳಮೀಸಲಾತಿ ಜಾರಿಯನ್ನು ಮುಂದೂಡುತ್ತಲೇ ಬಂದಿದೆ. ಕಾಂಗ್ರೆಸ್ ಪಕ್ಷದ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಗಾಂಧಿ, ರಾಹುಲ್‌ಗಾಂಧಿ ಅವರುಗಳಾಗಲಿ ಒಳಮೀಸಲಾತಿ ಪರ ಧ್ವನಿ ಎತ್ತಿಲ್ಲ. ಮುಂದಿನ ದಿನಗಳಲ್ಲಿ ಮಾದಿಗರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪಿ.ಎನ್.ರಾಮಯ್ಯ ತಿಳಿಸಿದರು.
ಸಭೆಯಲ್ಲಿ ಮಹಾಜನ್ ಪರಿವಾರದ ರಾಜ್ಯಧ್ಯಕ್ಷ ಹಂಚಿಹಳ್ಳಿ ರಾಮಸ್ವಾಮಿ, ಜೈ ಭೀಮ್ ಸೇವಾ ಸಮಿತಿಯ ಹಬ್ಬತ್ತನಹಳ್ಳಿ ಶ್ರೀನಿವಾಸ್, ದಲಿತ ವಿಮೋಚನಾ ಸೇನೆಯ ಸಂಚಾಲಕ ತಿಮ್ಮೇಗೌಡ, ಡಿಎಸ್‌ಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಸುನಿಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಣ್ಣ, ಎ.ನಾಗೇಶ್, ಮಂಜುನಾಥ್.ಪಿ, ಕರ್ನಾಟಕ ಮದಾರ ಮಹಾಸಭಾದ ಹೆಗ್ಗರೆ ನರಸಿಂಹರಾಜ್, ಎಸ್.ಸಿ.ಸಿದ್ದಯ್ಯ, ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


