ತಿಪಟೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ ಜಯಂತಿ ಗ್ರಾಮದ ಬಳಿ ನಿರ್ಮಿಸಿರುವ ಅಂಡರ್‌ಪಾಸ್ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ, ಕೂಡಲೇ ಸರ್ವಿಸ್ ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ಗ್ರಾಮಸ್ಥರು ತಾಲ್ಲೂಕು ಆಡಳಿತ ಸೌಧದ ಮುಂಭಾಗ ಬೃಹತ್ ಧರಣಿ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅಂಗವಾಗಿ ನಿರ್ಮಿಸಲಾದ ಅಂಡರ್‌ಪಾಸ್ ಅತ್ಯಂತ ಕಳಪೆಯಾಗಿದ್ದು, ಮಳೆಗಾಲದಲ್ಲಿ ತಿಂಗಳುಗಟ್ಟಲೆ ನೀರು ನಿಲ್ಲುತ್ತಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಜಯಂತಿ ಗ್ರಾಮದಲ್ಲಿ 100ಕ್ಕೂ ಹೆಚ್ಚು ಕಾಡುಗೊಲ್ಲ ಸಮುದಾಯದ ಕುಟುಂಬಗಳಿದ್ದು, ಕುರಿ ಮತ್ತು ದನಕರುಗಳ ಸಾಕಾಣಿಕೆಯೇ ಇವರ ಮುಖ್ಯ ಕಸುಬಾಗಿದೆ. ಸರ್ವಿಸ್ ರಸ್ತೆ ಇಲ್ಲದ ಕಾರಣ ಜಾನುವಾರುಗಳನ್ನು ರಸ್ತೆ ದಾಟಿಸುವಾಗ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ.
ಗ್ರಾಮದ ಬಳಿ ಸೂಕ್ತ ಬಸ್ ತಂಗುದಾಣದ ವ್ಯವಸ್ಥೆಯೂ ಇಲ್ಲದ ಕಾರಣ ರೈತರು ಮತ್ತು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಕೂಡಲೇ ಸುಸಜ್ಜಿತ ತಂಗುದಾಣ ನಿರ್ಮಿಸಬೇಕೆಂದು ಕರಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಗಂಗಮ್ಮ ಒತ್ತಾಯಿಸಿದರು.
ತಾಲ್ಲೂಕು ಕಾಡುಗೊಲ್ಲರ ಸಂಘದ ಅಧ್ಯಕ್ಷ ಬಾಲರಾಜು ಮಾತನಾಡಿ, “ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೆದ್ದಾರಿ ಕಾಮಗಾರಿ ವಾಹನ ಸವಾರರಿಗೆ ಅನುಕೂಲವಾಗಿದ್ದರೂ, ಸ್ಥಳೀಯ ಗ್ರಾಮಸ್ಥರಿಗೆ ಮಾತ್ರ ಶಾಪವಾಗಿ ಪರಿಣಮಿಸಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಸ್ಯೆಯನ್ನು ಕೂಡಲೇ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಶಂಕರಪ್ಪ, ಜಯಣ್ಣ, ದಿನೇಶ್, ಈರಣ್ಣ ಸೇರಿದಂತೆ ಗ್ರಾಮದ ನೂರಾರು ರೈತರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


