ತಿಪಟೂರು: ನಗರದ ಬಂಡಿಹಳ್ಳಿಯಲ್ಲಿ ಚಿನ್ನ ಕಳ್ಳತನ ಮಾಡಿ ಮನೆಗೆ ಬೆಂಕಿ ಹಚ್ಚಿದ್ದ ಆರೋಪಿಯನ್ನು ನಗರ ಠಾಣೆ ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಏ.17 ರಂದು ರಾತ್ರಿ ಸುಮಾರು 11.30 ಗಂಟೆಗೆ ಸಂಜೆ ಸುಮಾರು 7.15 ಗಂಟೆಗೆ ಜಗದೀಶ್ ಎಂಬಾತ ಲಕ್ಷ್ಮಿ ಕೋಂ ಲೇ. ಚಂದ್ರಶೇಖರ್ ಎಂಬುವರ ಮನೆಗೆ ಬಂದು ನಿನ್ನ ತಂಗಿ ಎಲ್ಲಿದ್ದಾಳೆ ಎಂದು ಪ್ರಶ್ನಿಸಿದ್ದಾನೆ. ಆಗ ಆಕೆ ಇಲ್ಲ ಎಂದು ಹೇಳುತ್ತಿದ್ದಂತೆ ಬೆದರಿಕೆ ಹಾಕಿದ್ದಾನೆ. ಇದರಿಂದ ಭಯಗೊಂಡ ಲಕ್ಷ್ಮಿ ಮನೆಗೆ ಬೀಗ ಹಾಕಿ, ಹತ್ತಿರದ ಗಂಗಾಮಣಿ ಅವರ ಮನೆಗೆ ತೆರಳಿದ್ದಾರೆ. ಅಲ್ಲಿಗೂ ಬಂದ ಜಗದೀಶ್ ಬೆದರಿಕೆ ಮುಂದುವರಿಸಿದ್ದಾನೆ. ನಂತರ ಗಂಗಾಮಣಿ ಮತ್ತು ಅವರ ತಮ್ಮ ಅರುಣ್ ಲಕ್ಷ್ಮಿ ಅವರ ಮನೆ ಬಳಿ ಬಂದು ನೋಡುವಾಗ ಜಗದೀಶ್ ಮನೆಯ ಮೇಲ್ಛಾವಣಿಯಿಂದ ಇಳಿಯುತ್ತಿರುವುದು ಕಂಡಿದೆ.
ಅಲ್ಲದೆ ಇದೇ ವೇಳೆ ಮನೆಯ ಕಿಟಕಿಯಿಂದ ಬೆಂಕಿಯ ಹೊಗೆ ಬರುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣ ಲಕ್ಷ್ಮಿ ಮನೆಗೆ ತೆರಳಿ ನೋಡಿದಾಗ, ಮನೆಯ ಬಾಗಿಲು ಜಖಂ ಆಗಿದ್ದು, ಕೂಡಲೇ ಅಗ್ನಿಶಾಮಕ ದಳದ ಕಚೇರಿಗೆ ಫೋನಿನ ಮುಖಾಂತರ ತಿಳಿಸಿ, ಸ್ಥಳಕ್ಕೆ ಬಂದ ಸಿಬ್ಬಂದಿ ಬೆಂಕಿಯನ್ನು ಆರಿಸಿದ್ದಾರೆ. ಬೆಂಕಿಯಿಂದ ಮನೆಯಲ್ಲಿದ್ದ ಕಬ್ಬಿಣದ ಬೀರು, ಅದರೊಳಗಿನ ಬಟ್ಟೆಗಳು ಹಾಗೂ ಇತರೆ ವಸ್ತುಗಳು ಟಿ.ವಿ. ಮತ್ತು ಹಾಸಿಗೆ ಸಂಪೂರ್ಣ ಸುಟ್ಟು ಹೋಗಿ, ಸುಮಾರು 60,000 ರೂ.ಗಳಿಗೂ ಹೆಚ್ಚು ನಷ್ಟ ಉಂಟಾಗಿದೆ.
ಲಕ್ಷ್ಮಿ ಗಾರ್ಮೆಂಟ್ಸ್ ಕಾರ್ಮಿಕರಾಗಿದ್ದು, ನಗರದ ಬಂಡಿಹಳ್ಳಿಯ ಪ್ರಶಾಂತ್ ಎಂಬುವರ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಇವರ ಸ್ವಗ್ರಾಮ ಹಾಸನ ತಾಲೂಕಿನ ಶಾಂತಿ ಗ್ರಾಮ ಹೋಬಳಿಯ ಉಪ್ಪಾರ ಹೊಸಹಳ್ಳಿ. ಲಕ್ಷ್ಮಿಯ ತಂಗಿ ಆಶಾ ಎಂಬಾಕೆಗೆ ಅರಸೀಕೆರೆ ತಾಲೂಕಿನ ಬೆಳಗುಂಬ ಗ್ರಾಪಂ ವ್ಯಾಪ್ತಿಯ ಬಸವೇಶ್ವರ ನಗರ (ಹೊಸಪೇಟೆ) ವಾಸಿ ಜಗದೀಶ್ ಎಂಬಾತ ಪರಿಚಿತನಾಗಿದ್ದು, ಈ ಹಿಂದೆ ಹಲವು ಬಾರಿ ಲಕ್ಷ್ಮಿ ಅವರ ಮನೆಗೆ ಬಂದಿದ್ದನು. ತಂಗಿ ಆಶಾ ಬಗ್ಗೆ ಮಾಹಿತಿ ನೀಡದ ಕಾರಣ ದ್ವೇಷದಿಂದ ಜಗದೀಶ್ ಮನೆ ಬಾಗಿಲು ಒಡೆದು, ಒಳಗೆ ಪ್ರವೇಶಿಸಿ ವಸ್ತುಗಳಿಗೆ ಬೆಂಕಿ ಹಚ್ಚಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ತಕ್ಷಣ ಕಾರ್ಯಾಚರಣೆ ನಡೆಸಿದ ನಗರ ಠಾಣೆಯ ಪೊಲೀಸರು ಘಟನೆ ನಡೆದ 24 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕೈಕೋಳ ತೊಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ದೂರಿನ ಮೇರೆಗೆ ಠಾಣಾ ಮೊಕದ್ದಮೆ ಸಂ. 60/2026ರಲ್ಲಿ ಕಲಂ 326(ಉ), 324(5), 351(2), 331 ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಆರೋಪಿ ಜಗದೀಶ್ ಮನೆಗೆ ಬೆಂಕಿ ಹಚ್ಚುವ ಮೊದಲು ಮನೆಯಲ್ಲಿದ್ದ ಚಿನ್ನವನ್ನು ಕದಿರುವುದು ಬಹಿರಂಗವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


