ನವದೆಹಲಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್, ಜಾಮೀನು ಕೋರಿ ಈಗ ಎರಡನೇ ಬಾರಿಗೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರ ಕಚೇರಿಯ ಮೂಲಕ ಈ ಹೊಸ ಜಾಮೀನು ಅರ್ಜಿಯನ್ನು ಸಲ್ಲಿಕೆ ಮಾಡಲಾಗಿದೆ.
ದರ್ಶನ್ ಪರ ಸಲ್ಲಿಕೆಯಾಗಿರುವ ಈ ಅರ್ಜಿಯಲ್ಲಿ ಪ್ರಮುಖವಾಗಿ ವಿಚಾರಣೆಯ ವಿಳಂಬದ ಬಗ್ಗೆ ಉಲ್ಲೇಖಿಸಲಾಗಿದೆ, ರೇಣುಕಾಸ್ವಾಮಿ ಕೇಸ್ ನ ಟ್ರಯಲ್ ಆರಂಭವಾಗಿ 8 ತಿಂಗಳು ಕಳೆದಿದ್ದರೂ, ಸಾಕ್ಷಿಗಳ ವಿಚಾರಣೆ ಇನ್ನೂ ಮುಕ್ತಾಯವಾಗಿಲ್ಲ.
ಪ್ರಕರಣದಲ್ಲಿ ಒಟ್ಟು 273 ಸಾಕ್ಷಿಗಳಿದ್ದು, ಈವರೆಗೆ ಕೇವಲ 15 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ. ಇದೇ ವೇಗದಲ್ಲಿ ವಿಚಾರಣೆ ಮುಂದುವರಿದರೆ ಪೂರ್ಣಗೊಳ್ಳಲು ಹಲವು ವರ್ಷಗಳೇ ಬೇಕಾಗಬಹುದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ತಾವು ಟ್ರಯಲ್ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದು, ಇದನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡಬೇಕು ಎಂದು ದರ್ಶನ್ ಮನವಿ ಮಾಡಿದ್ದಾರೆ.
ವರದಿಯ ಪ್ರಕಾರ, ಟ್ರಯಲ್ ಕೋರ್ಟ್‌ನಲ್ಲಿ ರೇಣುಕಾಸ್ವಾಮಿ ಪೋಷಕರನ್ನು ಹೊರತುಪಡಿಸಿ ಮಹಜರು ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ. ಇದರ ನಡುವೆ ಆರೋಪಿಗಳ ಪರವಾಗಿ ಮನೆ ಊಟ, ಹಾಸಿಗೆ–ದಿಂಬು ಸೇರಿದಂತೆ ಸರಿ ಸುಮಾರು 7ಕ್ಕೂ ಹೆಚ್ಚು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಇದು ಕೂಡ ವಿಚಾರಣೆ ವಿಳಂಬಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ದರ್ಶನ್ ಸಲ್ಲಿಸಿರುವ ಈ ಎರಡನೇ ಜಾಮೀನು ಅರ್ಜಿಯ ವಿಚಾರಣೆಯು ಮೇ 4ರಂದು ನಡೆಯಲಿದೆ ಎಂದು ದಿನಾಂಕ ನಿಗದಿಯಾಗಿದೆ. ಈ ಹಿಂದೆ ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ದರ್ಶನ್ ಅವರ ಜಾಮೀನನ್ನು ರದ್ದುಗೊಳಿಸಿ ತಕ್ಷಣ ಶರಣಾಗುವಂತೆ ಸೂಚಿಸಿತ್ತು. ಸದ್ಯ ಜೈಲಿನಲ್ಲಿರುವ ದರ್ಶನ್ ಈಗ ಸುಪ್ರೀಂ ಕೋರ್ಟ್‌ನಿಂದ ಸಿಗುವ ತೀರ್ಪಿನ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


