ಮಧುಗಿರಿ: ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶಕ್ಕೆ ಮೇ 20ರಂದು ತುಮಕೂರಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದು, ನಮ್ಮ ತಾಲೂಕಿನಿಂದ ಅಧಿಕ ಜನರನ್ನು ಕರೆತರುವ ನಿಟ್ಟಿನಲ್ಲಿ 250ಕ್ಕೂ ಅಧಿಕ ಬಸ್ ಗಳನ್ನು ನಿಯೋಜಿಸಲಾಗಿದೆ. ಬರುವವರಿಗೆ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೆ.ಎನ್.ರಾಜಣ್ಣ ಸಲಹೆ ನೀಡಿದರು.
ಅವರು ತಾಲೂಕು ಪಂಚಾಯಿತಿ ಆವರಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಡಿ.ದೇವರಾಜು ಅರಸು ಅಭಿವೃದ್ಧಿ ನಿಗಮದಿಂದ ಬುಧವಾರ 20 ಅರ್ಹ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಿದ ನಂತರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಧಿಕಾರಿಗಳು ಅಂದು ಬೆಳಿಗ್ಗೆ ಸಕಾಲಕ್ಕೆ ಜನರನ್ನು ಹೊರಡಿಸಿ ಕಾರ್ಯಕ್ರಮಕ್ಕೆ ಕರೆತರಬೇಕು. ಇದು ನಮ್ಮ ಸರ್ಕಾರದ ಸಾಧನಾ ಸಮಾವೇಶವಾಗಿದ್ದು, ಬರುವ ಜನರು ಮೀಸಲಿರುವ ಆಸನಗಳಲ್ಲಿ ಕೂತು ವೀಕ್ಷಿಸಬೇಕು. ಸಮಾರಂಭ ಮುಗಿಯುವ ತನಕ ಯಾರೂ ಸಹ ಎದ್ದು ಬರಬಾರದು. ನಂತರ ಅವರಿಗಾಗಿ ನಿಗದಿಪಡಿಸಿರುವ ಬಸ್‌ಗಳಲ್ಲಿ ಆಯಾಯ ಗ್ರಾಮಗಳಿಗೆ ಜನರನ್ನು ಕ್ಷೇಮವಾಗಿ ಬಿಡುವುದು ಸಹ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಅವರು ಕರ್ನಾಟಕ ಮಾದರಿಯಲ್ಲಿ ಉಚಿತ ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಆದರೆ ವಿಜಯ್ ಅವರ ಹಾದಿ ಮುಳ್ಳಿನ ಹಾದಿಯಾಗಿದ್ದು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಭಾವಾವೇಶದಲ್ಲಿ ಭರವಸೆಗಳನ್ನು ನೀಡುವುದರಿಂದ ಮುಂದೆ ಎದುರಾಗುವ ಸಮಸ್ಯೆ–ಸವಾಲುಗಳನ್ನು ಹೇಗೆ ಸ್ವೀಕರಿಸಿ ಪರಿಹರಿಸಿಕೊಳ್ಳುತ್ತಾರೆನ್ನುವುದನ್ನು ಕಾದು ನೋಡಬೇಕು ಎಂದರು.
ಕರ್ನಾಟಕದಲ್ಲಿ ಸಿ.ಎಂ.ಸಿದ್ದರಾಮಯ್ಯ ಅವರ ಕುರ್ಚಿ ಅಲುಗಾಡುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಶಾಸಕ ಕೆ.ಎನ್.ರಾಜಣ್ಣ ಉತ್ತರಿಸಿ, ಮೋದಿ ಆಕಾಶದಲ್ಲಿ ತೇಲಾಡುತ್ತಿದ್ದು ಅವರು ಭೂಮಿ ಮೇಲೆ ಇಲ್ಲ. ಭೂಮಿಯ ಮೇಲೆ ಇದ್ದು ಮಾತನಾಡಿದರೆ ಅದು ಅರ್ಥವಾಗುತ್ತದೆ. ಆದ್ದರಿಂದ ನಮ್ಮ ಪಕ್ಷದ ವಿಚಾರ ಅವರಿಗೆ ಯಾಕೆ ಹೇಳಬೇಕು ಎಂದು ತಿರುಗೇಟು ನೀಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದೆ. ಜನಾದೇಶಕ್ಕೆ ನಾವು ತಲೆಬಾಗುತ್ತೇವೆ ಎಂದು ರಾಜಣ್ಣ ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ಶ್ರೀನಿವಾಸ್, ತಾಪಂ ಇಒ ಲಕ್ಷ್ಮಣ್, ಎಇ ಧನಂಜಯ್, ದೇವರಾಜ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ವಿ.ವೆಂಕಟರಾಜು, ಅಧಿಕಾರಿ ಕಲ್ಪನಾ ಬಾಯಿ, ಬಿಸಿಎಂ ಅಧಿಕಾರಿ ಜಯರಾಮ್, ಲೋಕೋಪಯೋಗಿ ಇಲಾಖೆಯ ಇಇ ಹನುಮಂತರಾವ್, ಎಇಇ ಸಂಪತ್ ಕುಮಾರ್, ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ಕಾಂತರಾಜು, ಪುರಸಭಾ ಮುಖ್ಯಾಧಿಕಾರಿ ಎಸ್.ಸುರೇಶ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


