ಮಿಡಿಗೇಶಿ: ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿ, ಪತಿ ತೀವ್ರವಾಗಿ ಗಾಯಗೊಂಡಿರುವ ಧಾರುಣ ಘಟನೆ ಮೇ 28ರಂದು ಬೆಳಿಗ್ಗೆ ಮಿಡಿಗೇಶಿ ಹೋಬಳಿಯ ದೊಡ್ಡಯಲೂರು ಗ್ರಾಮದ ತಂಗುದಾಣದ ಸಮೀಪ ನಡೆದಿದೆ.
ಹೊಸಕೆರೆ ಗ್ರಾಮದ ನಿವಾಸಿ, ಪದ್ಮ (40) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಇವರ ಪತಿ, ಕೆಎಸ್‌ಆರ್‌ಟಿಸಿ ಚಾಲಕರಾಗಿರುವ ಸೋಮಶೇಖರ್ ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೇ 28ರ ಭಾನುವಾರ ಬೆಳಿಗ್ಗೆ ಸುಮಾರು 6:15ರ ವೇಳೆಗೆ ಸೋಮಶೇಖರ್ ಹಾಗೂ ಪದ್ಮ ದಂಪತಿಗಳು ತಮ್ಮ ಸಹೋದರನಿಗೆ ವಧು ನೋಡುವ ಸಲುವಾಗಿ ದ್ವಿಚಕ್ರ ವಾಹನದಲ್ಲಿ ಹಿಂದೂಪುರಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ದೊಡ್ಡಯಲೂರು ಗ್ರಾಮದ ಬಸ್ ತಂಗುದಾಣದ ಸಮೀಪ ಬರುತ್ತಿದ್ದಂತೆ, ಎದುರಿನಿಂದ ಚೀಲನಹಳ್ಳಿ ನಾಗಪ್ಪ ಎಂಬುವವರು ಡೇರಿಗೆ ಹಾಲು ಹಾಕಲು ತಮ್ಮ ದ್ವಿಚಕ್ರ ವಾಹನದಲ್ಲಿ ಬಂದಿದ್ದಾರೆ. ಆಗ ಎರಡೂ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.
ಡಿಕ್ಕಿಯ ತೀವ್ರತೆಗೆ ಪದ್ಮ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನು ಅಪಘಾತದಲ್ಲಿ ಸೋಮಶೇಖರ್ ಅವರ ಎದೆ, ಸೊಂಟ, ಕತ್ತಿನ ಹಿಂಭಾಗ ಹಾಗೂ ಕೈಕಾಲುಗಳಿಗೆ ತೀವ್ರ ಪೆಟ್ಟಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಮಿಡಿಗೇಶಿ ಠಾಣೆಯ ಪಿಎಸ್ ಐ ರವಿ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಪದ್ಮ ಅವರ ಶವವನ್ನು ಹಾಗೂ ಗಾಯಾಳು ಸೋಮಶೇಖರ್ ಅವರನ್ನು ತಕ್ಷಣವೇ ಮಧುಗಿರಿ ತಾಲ್ಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.
ಮಧುಗಿರಿ ತಾಲ್ಲೂಕು ಆಸ್ಪತ್ರೆಯ ವೈದ್ಯರು ಮೃತದೇಹದ ಶವಪರೀಕ್ಷೆ ನೆರವೇರಿಸಿದ್ದಾರೆ. ಸದ್ಯ ಅಪಘಾತಕ್ಕೆ ಈಡಾದ ಎರಡೂ ದ್ವಿಚಕ್ರ ವಾಹನಗಳನ್ನು (KA-64-S-7047 ಮತ್ತು KA-16-W-5541) ಪೊಲೀಸರು ವಶಕ್ಕೆ ಪಡೆದಿದ್ದು, ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


