ಕುಣಿಗಲ್: ಹೊಸದಾಗಿ ಕೊರೆದಿರುವ ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿದ್ದರೂ, ಏಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತೀರಾ ಎಂದು ಸಿಡಿಮಿಡಿಗೊಂಡ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ, ಜಿ.ಪಂ ಉಪ ಕಾರ್ಯದರ್ಶಿ ಕೆ.ಪಿ. ಸಂಜೀವಪ್ಪ ತಕ್ಷಣವೇ ಟ್ಯಾಂಕರ್ ನೀರು ಸರಬರಾಜು ನಿಲ್ಲಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾ.ಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ತಾಲೂಕಿನಲ್ಲಿ ಮಳೆಯಾಗಬೇಕಾಗಿತ್ತು ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಕೆರೆ ಕಟ್ಟೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಅಂತರ್ಜಲ ಮಟ್ಟ ಕುಸಿದು ಕೆಲವು ಗ್ರಾಮಗಳಲ್ಲಿ ಜನ ಜಾನುವಾರುಗಳ ಕುಡಿಯುವ ನೀರಿಗೆ ಸಮಸ್ಯೆಯಾದ ಹಿನ್ನೆಲೆಯಲ್ಲಿ 26 ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಸಲಾಗಿದೆ, ಈ ಪೈಕಿ 10 ಕೊಳವೆ ಬಾವಿ ವಿಫಲಗೊಂಡಿದ್ದು, ಡಿ.ಹೊಸಹಳ್ಳಿ, ತಾವರೆಕೆರೆ, ಭಕ್ತರಹಳ್ಳಿ, ಮಡಿಕೆಹಳ್ಳಿ, ಬಿಳಿದೇವಾಲಯ, ಕಗ್ಗರೆ ಗ್ರಾ.ಪಂ ವ್ಯಾಪ್ತಿಯ ಸೇರಿದಂತೆ 16 ಗ್ರಾಮಗಳ ಕೊಳವೆ ಬಾವಿಯಲ್ಲಿ ನೀರು ಸಿಕ್ಕಿದೆ, ಆದರೂ ಈ ಗ್ರಾಮಗಳಿಗೆ ಈಗಲೂ ಸಹಾ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು, ನೀರು ಇಲ್ಲದ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಸಂಜೀವಪ್ಪ ಪಿಡಿಒಗಳಿಗೆ ತಾಕೀತು ಮಾಡಿದರು.
ಕುಣಿಗಲ್ ತಾ.ಪಂ ಸಭಾಂಗಣದಲ್ಲಿ ತಾಲೂಕು ಪಂಚಾಯ್ತಿ ಆಡಳಿತಾಧಿಕಾರಿ, ಜಿ.ಪಂ ಉಪ ಕಾರ್ಯದರ್ಶಿ ಕೆ.ಪಿ. ಸಂಜೀವಪ್ಪ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
ಕೊಳವೆ ಬಾವಿಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ, ಬೀದಿ ನಾಯಿಗಳ ಉಪಟಳಕ್ಕೆ ಕಡಿವಾಣ ಹಾಕುವಂತೆ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು ಲಸಿಕೆ ಹಾಕಿಸುವಂತೆ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಜನ ಸಂಖ್ಯೆಗೆ ಅನುಗುಣವಾಗಿ ಶೇ 33 ರಷ್ಟು ಮರಗಿಡಗಳನ್ನು ಬೆಳೆಸಬೇಕಾಗಿತ್ತು ಆದರೆ ಅಂಕಿ ಅಂಶಗಳ ಪ್ರಕಾರ ಕೇವಲ ಶೇ 6 ರಷ್ಟು ಮಾತ್ರ ಬೆಳೆಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂಜೀವಪ್ಪ ಮುಂದಿನ ದಿನದಲ್ಲಿ ಜನರು ಆಕ್ಸಿಜನ್‍ಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಹಾಗಾಗಿ ಅರಣ್ಯ ಪ್ರದೇಶವನ್ನು ಉಳಿಸಲು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಜನರಿಗೆ ಯಾವುದೇ ತೊಂದರೆ ಉಂಟಾಗದಂತೆ ಗ್ರಾಮ ಮಟ್ಟದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಹಾಗೂ ಸಮರ್ಪಕ ಕುಡಿಯುವ ನೀರಿನ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೇಸಿಗೆ ಹಾಗೂ ಮಳೆಗಾಲದ ಸಂದರ್ಭದಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ಮುಂಚಿತವಾಗಿ ಗುರುತಿಸಿ ತ್ವರಿತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
| ಕೆ.ಪಿ.ಸಂಜೀವಪ್ಪ ಉಪ ಕಾರ್ಯದರ್ಶಿ, ಜಿ.ಪಂ
ಇದೇ ವೇಳೆ ವಿವಿಧ ಇಲಾಖೆಗಳ ಇಲಾಖಾವಾರು ಲಿಂಕ್ ದಾಖಲೆ ಕ್ರಿಯಾ ಯೋಜನೆಗಳನ್ನು ಪರಿಶೀಲಿಸಿ ಅನುಮೋದನೆ ನೀಡಲಾಯಿತು. ಗ್ರಾಮೀಣಾಭಿವೃದ್ಧಿ ಹಾಗೂ ಸಾರ್ವಜನಿಕ ಸೇವೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುವಂತೆ ಸಂಜೀವಪ್ಪ ಸೂಚಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ, ಸರ್ಕಾರದ ಯೋಜನೆಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕರಿಗೆ ತಲುಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ಬಾಕಿ ಉಳಿದಿರುವ ಕಾಮಗಾರಿಗಳು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಶೀಘ್ರವಾಗಿ ಪೂರ್ಣ ಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ತಾ.ಪಂ ಇಒ ವಸಂತಕುಮಾರ್, ತಾಲೂಕು ಯೋಜನಾ ಸಹಾಯಕ ನಿರ್ದೇಶಕ ಕಾಂತರಾಜು, ಸಹಾಯಕ ಲೆಕ್ಕಾಧಿಕಾರಿ ಹೆಚ್.ಸಿ.ಶೈಲಜ ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


