ಕೊರಟಗೆರೆ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಯುವಕರ ಮೇಲೆ ನಿಯಂತ್ರಣ ತಪ್ಪಿದ ಟಾಟಾ ಏಸ್ ವಾಹನವೊಂದು ಹರಿದ ಪರಿಣಾಮ, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಘಟನೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಬೈರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೈರೇನಹಳ್ಳಿಯ ಸಿರಾ-ಚಿಕ್ಕಬಳ್ಳಾಪುರ ಹೆದ್ದಾರಿ ರಸ್ತೆಯಲ್ಲಿರುವ ಬಸ್ ನಿಲ್ದಾಣದಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ನವೀನ್ (೧೮) ಮತ್ತು ನಕುಲ್ (೧೭) ಮೃತಪಟ್ಟ ದುರ್ದೈವಿ ಯುವಕರಾಗಿದ್ದಾರೆ.
ಗೌರಿಬಿದನೂರು ಕಡೆಯಿಂದ ಮಧುಗಿರಿ ಕಡೆಗೆ ಅತೀ ವೇಗವಾಗಿ ಬಂದ ಟಾಟಾ ಏಸ್ ವಾಹನದ ಚಾಲಕನ ಅಜಾಗರೂಕತೆ ಹಾಗೂ ನಿರ್ಲಕ್ಷ್ಯ ಚಾಲನೆಯೇ ಈ ಘಟನೆಗೆ ಕಾರಣ ಎನ್ನಲಾಗಿದೆ. ರಸ್ತೆ ಬದಿಯಲ್ಲಿದ್ದ ಯುವಕರಿಬ್ಬರನ್ನು ಬಲಿಪಡೆದ ವಾಹನವು, ಅಷ್ಟಕ್ಕೇ ನಿಲ್ಲದೆ ನಿಯಂತ್ರಣ ಕಳೆದುಕೊಂಡು ಹತ್ತಿರದಲ್ಲೇ ಇದ್ದ ಹೋಟೆಲ್ ಒಂದಕ್ಕೆ ನುಗ್ಗಿದೆ. ಘಟನೆಯಿಂದಾಗಿ ಹೋಟೆಲ್ ಒಳಗಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕೊರಟಗೆರೆ ಸಿಪಿಐ ಪುರುಷೋತ್ತಮ್ ಹಾಗೂ ಪಿಎಸ್‌ಐ ತೀರ್ಥೇಶ್ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


