ತುಮಕೂರು: ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜುಲೈ 18 ರಂದು ರಾಷ್ಟ್ರೀಯ ಲೋಕ ಅದಾಲತ್ ಮತ್ತು ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಪ್ರಕರಣಗಳ ವಿಶೇಷ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಬಿ.ಜಯಂತ್ ಕುಮಾರ್ ತಿಳಿಸಿದರು.
ನ್ಯಾಯಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ವ್ಯಾಜ್ಯಪೂರ್ವ ಪ್ರಕರಣಗಳಿರಬಹುದು ಅಥವಾ ಈಗಾಗಲೇ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಿರಬಹುದು ಪ್ರಕರಣಗಳನ್ನು ಕಕ್ಷಿದಾರರು ಹಾಗೂ ವಕೀಲರು ಮುಂದೆ ಬಂದು ಲೋಕ ಅದಾಲತ್ನಲ್ಲಿ ಭಾಗವಹಿಸುವ ಮೂಲಕ ವರ್ಷಾನುಗಟ್ಟಲೆ ನ್ಯಾಯಾಲಯಕ್ಕೆ ಅಲೆದು ಸಮಯ ವ್ಯರ್ಥ ಮಾಡಿಕೊಳ್ಳುವುದನ್ನು ತಪ್ಪಿಸಬಹುದಾಗಿದೆ ಎಂದರು.
2026 ರಲ್ಲಿ ನಡೆದ ಲೋಕ ಅದಾಲತ್ ನಲ್ಲಿ ಜಿಲ್ಲಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 1,08,528 ಪ್ರಕರಣಗಳಲ್ಲಿ 14,812 ಪ್ರಕರಣಗಳು ಹಾಗೂ ವ್ಯಾಜ್ಯಪೂರ್ವ 3,09,047 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ನ್ಯಾಯಾಲಯದಲ್ಲಿ ಬಾಕಿ ಇದ್ದ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ ಒಟ್ಟು 3,23,859 ಪ್ರಕರಣಗಳನ್ನು ಇತ್ಯರ್ಥಪಡಿಸಿರುವುದಾಗಿ ತಿಳಿಸಿದರು.
ಸರ್ವರಿಗೂ ನ್ಯಾಯ ಎಂಬುದು ಭಾರತದ ಕಾನೂನು ಸೇವೆಗಳ ಧೇಯ. ಆರ್ಥಿಕ ದೌರ್ಬಲ್ಯದ ಕಾರಣಗಳಿಂದಾಗಿ ಯಾರೂ ಸಹ ನ್ಯಾಯ ಪಡೆಯುವುದರಿಂದ ವಂಚಿತರಾಗಬಾರದು ಎಂಬ ಕಾರಣದಿಂದ ಕಾನೂನು ಸೇವೆಗಳನ್ನು ಒದಗಿಸಲಾಗುತ್ತಿದೆ. ಜನತಾ ನ್ಯಾಯಾಲಯಗಳ ಮೂಲಕ ನ್ಯಾಯ ನಿರ್ಣಯ ಇತ್ಯರ್ಥಪಡಿಸಲಾಗುತ್ತಿದೆ. ಈ ಕಾರಣಕ್ಕಾಗಿ ಇದೊಂದು ಉತ್ತಮ ಹೆಜ್ಜೆಯಾಗಿದ್ದು, ಜುಲೈ 11 ರ ಲೋಕ ಅದಾಲತ್ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದರು.
ಸಂಚಾರಿ ಉಲ್ಲಂಘನೆ: ದಂಡದ ಮೊತ್ತ ಅರ್ಧದಷ್ಟು ರಿಯಾಯಿತಿ
ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ಗಳಲ್ಲಿ ದಾಖಲಾಗಿ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಜುಲೈ 10ರವರೆಗೂ ಕಾಲಾವಕಾಶ ನೀಡಲಾಗಿದೆ. ಸಂಬಂಧಪಟ್ಟ ವಾಹನದ ಮಾಲೀಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. 2026ರ ಮೇ ತಿಂಗಳಿಗಿಂತ ಹಿಂದೆ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ಗಳಲ್ಲಿ ದಾಖಲಾಗಿ ಬಾಕಿ ಇರುವ ಪ್ರಕರಣಗಳಿಗೆ ಈ ರಿಯಾಯಿತಿ ಅನ್ವಯಿಸುತ್ತದೆ. ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಿರುವುದರಿಂದ ನಿಗದಿತ ಅವಧಿಯೊಳಗೆ ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ನ್ಯಾಯಾಧೀಶರು ತಿಳಿಸಿದರು.
ಚೆಕ್ ಅಮಾನ್ಯ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಕಾರ್ಮಿಕ ವಿವಾದಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ವೈವಾಹಿಕ ಹಾಗೂ ಇತರೆ ಸಿವಿಲ್ ಪ್ರಕರಣಗಳು ವ್ಯಾಜ್ಯಪೂರ್ವ ಪ್ರಕರಣಗಳ ಅಡಿಯಲ್ಲಿ ಬರುತ್ತವೆ. ರಾಜಿಯಾಗಬಲ್ಲ ಅಪರಾಧಿ ಪ್ರಕರಣಗಳು ಸೇರಿದಂತೆ ವಿವಿಧ 18 ರೀತಿಯ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಾಗಿದ್ದು, ಇವುಗಳನ್ನೂ ಸಹ ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲೋಕೇಶ ಧನಪಾಲ ಹಾವಳೆ ಅವರು ಮಾತನಾಡಿ ಪ್ರತಿದಿನ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಲೋಕ ಅದಾಲತ್ಗೆ ಸಂಬಂಧಿಸಿದಂತೆ ಪೂರ್ವ ಬೈಠಕ್ಗಳು ನಡೆಯುತ್ತವೆ. ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬಹುದು. ದೂರವಾಣಿ 0816-2255133 ಅಥವಾ 9141193959 ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


