ಮಧುಗಿರಿ: ಶಾಸಕ ಕೆ.ಎನ್.ರಾಜಣ್ಣ ಮತ್ತು ಜಮೀರ್ ಅಹಮ್ಮದ್ ಖಾನ್ ರವರಿಗೆ ಸಚಿವ ಸ್ಥಾನ ನೀಡುವಂತೆ ಅಲ್ಪ ಸಂಖ್ಯಾತ ಘಟಕದ ಬಾಬಾಫಕ್ರುದ್ದೀನ್ ಆಗ್ರಹಿಸಿದರು.
ಅವರು ಅಲ್ಪ ಸಂಖ್ಯಾತ ಘಟಕ ಹಾಗೂ ತಾಲೂಕಿನ ಮುಸ್ಲಿಂ ಸಮುದಾಯದ ವತಿಯಿಂದ ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಸಮೀಪ ಕೆ.ಎನ್ ರಾಜಣ್ಣ ಹಾಗೂ ಬಿ.ಜೆಡ್.ಜಮೀರ್ ಅಹಮ್ಮದ್ ಖಾನ್ ರವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಅಹಿಂದ ವರ್ಗದ ಪರವಾಗಿರುವ ನಾಯಕರಾದ ಕೆ.ಎನ್.ರಾಜಣ್ಣ ಮತ್ತು ಜಮೀರ್ ಅಹಮ್ಮದ್ ಖಾನ್ ರವರುಗಳು ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರ ಹಿಡಿಯಲು ಪ್ರಮುಖ ಪಾತ್ರವಹಿಸಿದ್ದಾರೆ. ರಾಜಣ್ಣ ರವರು ಆಲದ ಮರ ಇದ್ದಂತೆ. ಇವರನ್ನು ಡಿ.ಕೆ.ಶಿವಕುಮಾರ್ ರವರ ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡಿಕೊಂಡರೆ ಹಿಂದುಳಿದ ವರ್ಗಗಳಿಗೆ ನ್ಯಾಯ ದೊರಕಿಸುವ ಕಾರ್ಯವಾಗಲಿದೆ. ಜಮೀರ್ ಅಹಮ್ಮದ್ ರವರು ಅಲ್ಪಸಂಖ್ಯಾತ ನಾಯಕರಾಗಿದ್ದು ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ದುಡಿದಿದ್ದಾರೆ. ಮುಂಬರುವ 2028ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಲು ಸಾಧ್ಯವಾಗುತ್ತದೆ ಎಂದರು.
ಯುವ ಮುಖಂಡ ರಫೀಕ್ ಅಹಮದ್ ಮಾತನಾಡಿ, ಕೆ.ಎನ್.ರಾಜಣ್ಣ ರವರು ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಸಮುದಾಯಗಳ ಪರ ಧ್ವನಿ ಎತ್ತುವ ನಾಯಕರಾಗಿದ್ದಾರೆ. ಜಮೀರ್ ಅಹಮದ್ ರವರು ರಾಜ್ಯದ ಮುಸ್ಲಿಂ ಸಮುದಾಯದ ನಾಯಕರಾಗಿದ್ದಾರೆ. ಇವರಿಬ್ಬರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದರು.
ಮೌಲಾನ ಮುಫ್ತಿ ಅಫ್ತಾಬ್, ಮುಸ್ತಾಕ್ ಮೌಲಾನ, ಎಂ.ಆರ್.ಖಲೀಲ್, ಹಿರಿಯ ಮುಖಂಡ ಸೈಯದ್ ಸಿಕಂದರ್, ಸಾದಿಕ್, ಶಫೀಕ್, ಬಿ.ಜೆಡ್ ಅಬ್ದುಲ್ ಸಲಾಮ್, ಮಂಜೂರ್ ಅಹಮದ್, ಅನೀಸ್, ಮೊಹಮ್ಮದ್ ಶಾಮಿರ್, ರುಖಿ, ಯಾಸೀನ್, ತೌಸಿಫ್, ಇರ್ಫಾನ್, ಅಲಿ, ಪರ್ವೇಜ್, ಕಿಫಾಯತ್, ಶಫೀಕ್ ಅಹಮದ್, ಅಲ್ಲೂಬಾ ಸೇರಿದಂತೆ ಹೆಚ್ಚಿನ ಮುಸ್ಲಿಮ್ ಬಾಂಧವರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


