ಬೆಂಗಳೂರು: ಸ್ನೇಹಾಲಯ ಈ ಕ್ರಿಯೇಷನ್ಸ್ ಲಾಂಛನದಲ್ಲಿ ಅದ್ಧೂರಿಯಾಗಿ ಮೂಡಿಬರುತ್ತಿರುವ, ತೀವ್ರ ಕುತೂಹಲ ಕೆರಳಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ಚಂದ್ರಗಿರಿ’ ತನ್ನ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದೆ. ಹೊಸಕೋಟೆ, ವೈಟ್ ಫೀಲ್ಡ್ ಹಾಗೂ ಬೆಳ್ಳಿಕೆರೆ ಸುತ್ತಮುತ್ತಲಿನ ಸುಂದರ ಮತ್ತು ರಹಸ್ಯಮಯ ಪರಿಸರದಲ್ಲಿ ಸಿನಿಮಾದ ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.
ಈ ಚಿತ್ರದ ಕಥಾಹಂದರವು ವಿಚಿತ್ರ ಚಂದ್ರಗಿರಿ ಎಂಬ ಊರಿನ ಸುತ್ತ ಸುತ್ತುತ್ತದೆ, ಅಲ್ಲಿ ಪ್ರತಿ ಅಮಾವಾಸ್ಯೆಯಂದು ನಿಗೂಢ ಆತ್ಮಹತ್ಯೆಗಳು ನಡೆಯುತ್ತಿರುತ್ತವೆ. ಈ ನಿರಂತರ ಸಾವಿನ ರಹಸ್ಯವನ್ನು ಭೇದಿಸಲು ನಾಲ್ಕು ಜನ ಧೈರ್ಯಶಾಲಿಗಳು ಆ ಊರಿಗೆ ಬರುತ್ತಾರೆ. ಅಲ್ಲಿ ಅವರಿಗೆ ಎದುರಾಗುವ ಅನಿರೀಕ್ಷಿತ ಸವಾಲುಗಳು, ಭಯಾನಕ ಸಮಸ್ಯೆಗಳು ಹಾಗೂ ಅವುಗಳಿಂದ ಅವರು ಹೇಗೆ ರೋಚಕವಾಗಿ ಪಾರಾಗುತ್ತಾರೆ ಎಂಬ ಕೌತುಕದ ಹೂರಣವನ್ನು ಈ ಚಿತ್ರ ಒಳಗೊಂಡಿದೆ. ಚಿತ್ರಕ್ಕೆ ರಾಜೀವ್ ಕೃಷ್ಣ ಗಾಂಧಿ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಚಿತ್ರದಲ್ಲಿ ಸ್ಯಾಂಡಲ್‌ವುಡ್ ನ ಪ್ರಮುಖ ನಟರ ದಂಡೇ ಇದ್ದು, ಉಗ್ರಮ್ ರವಿ, ಶೋಭರಾಜ್, ಶಂಖನಾದ ಆಂಜಿನಪ್ಪ, ಅನ್ನಪೂರ್ಣ, ಬೆಂಗಳೂರು ಮನೋ, ಮರಿಸ್ವಾಮಿ, ಪಂಚಾಕ್ಷರಯ್ಯ, ವೀರಧನುಷ್, ಕಿಶೋರ್ ಕಾಸರಗೋಡು, ವೈಭವಿ ನಾಗರಾಜ್, ಬಲರಾಂ ಪಾಚಾಳ್, ರಂಜನ್ ಶೆಟ್ಟಿ, ಭಕ್ತರಹಳ್ಳಿ ರವಿ, ಸ್ವಸ್ತಿಕ್ ಶಂಕರ್, ಸೆವನ್ ರಾಜ್, ಯಶಸ್, ರೂಪಶ್ರೀ ಮತ್ತು ಕಿರಣ್ ಕುಮಾರ್ ಗಟ್ಟಿಗನಬ್ಬೆ ಮುಂತಾದವರು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ತಾಂತ್ರಿಕ ವರ್ಗದಲ್ಲೂ ನುರಿತ ತಜ್ಞರಿದ್ದು, ಎಂ. ಎಲ್. ರಾಜ ಅವರ ಹಿನ್ನೆಲೆ ಸಂಗೀತ, ಗುರುದತ್ ಮುಸರಿ ಅವರ ಛಾಯಾಗ್ರಹಣ ಹಾಗೂ ಡಿ. ಮಲ್ಲಿ ಅವರ ಸಂಕಲನ ಚಿತ್ರಕ್ಕಿದೆ. ಇನ್ನುಳಿದಂತೆ ವೈಲೆಂಟ್ ವೇಲು ಅವರ ಸಾಹಸ ನಿರ್ದೇಶನ, ಮೋಹನ್ ಕುಮಾರ್ ಅವರ ಪ್ರಸಾಧನ, ಇಂದ್ರಕುಮಾರ್ ಅವರ ಸ್ಥಿರಚಿತ್ರಣ ಮತ್ತು ಮಲ್ಲಿಕಾರ್ಜುನ ಹಾಗೂ ಎಂ. ಜಿ. ಕಲ್ಲೇಶ್ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ. ವಿ.ಎಂ.ಎಸ್. ಗೋಪಿ ಪತ್ರಿಕಾ ಸಂಪರ್ಕದ ಜವಾಬ್ದಾರಿ ನಿಭಾಯಿಸಿದ್ದಾರೆ.
ಮೊದಲ ಹಂತದ ಯಶಸ್ಸಿನ ಬಳಿಕ ಚಿತ್ರತಂಡ ಈಗ ಎರಡನೇ ಹಂತದ ಚಿತ್ರೀಕರಣಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಪ್ರಕೃತಿ ಸೌಂದರ್ಯದ ನಡುವೆ ಕಥೆಯನ್ನು ಮತ್ತಷ್ಟು ರೋಚಕವಾಗಿ ಸೆರೆಹಿಡಿಯಲು ಮುಂದಿನ ಶೂಟಿಂಗ್ ಅನ್ನು ಸಕಲೇಶಪುರ ಮತ್ತು ಚಿಕ್ಕಮಗಳೂರಿನ ಸುತ್ತಮುತ್ತಲಿನ ಹಸಿರು ಮಡಿಲಿನಲ್ಲಿ ನಡೆಸಲು ಚಿತ್ರತಂಡ ಪ್ಲಾನ್ ಮಾಡಿದೆ.
ವರದಿ: ವಿ.ಎಂ.ಎಸ್. ಗೋಪಿ, ಬೆಂಗಳೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




