ಪಾವಗಡ: ತಾಲೂಕಿನ ನಾಗಲಮಡಿಕೆ ಹೋಬಳಿಯ ಕೆ. ಸೇವಾಲಾಲಪುರ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದ ಸತ್ತಿ ದೇವರ ಮಹೋತ್ಸವ ಹಾಗೂ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 150ಕ್ಕೂ ಅಧಿಕ ಮಂದಿ ವಾಂತಿ–ಭೇದಿಯಿಂದ ಅಸ್ವಸ್ಥರಾಗಿದ್ದಾರೆ.
ಕಾರ್ಯಕ್ರಮದಲ್ಲಿ ಪಲಾವ್, ಬಾದುಷಾ, ಬಟಾಣಿ ಪಲ್ಯ, ಕೋಸಂಬರಿ, ಅನ್ನ–ಸಾಂಬಾರ್, ಮೊಸರು ಹಾಗೂ ಬಜ್ಜಿ ವಿತರಿಸಲಾಗಿತ್ತು. ರಾತ್ರಿ 10 ಗಂಟೆಯ ನಂತರ ಊಟ ಮಾಡಿದವರಲ್ಲಿ ಲಕ್ಷಣಗಳು ಕಾಣಿಸಿಕೊಂಡು, ಶುಕ್ರವಾರ ಬೆಳಗ್ಗಿನ ವೇಳೆಗೆ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.
ಅಸ್ವಸ್ಥರಾದವರಲ್ಲಿ 40ಕ್ಕೂ ಹೆಚ್ಚು ಮಂದಿಯನ್ನು ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಏಳುಕ್ಕೂ ಹೆಚ್ಚು ಮಕ್ಕಳು ಸೇರಿದ್ದಾರೆ. ಉಳಿದವರಿಗೆ ಗ್ರಾಮದಲ್ಲೇ ಆರೋಗ್ಯ ಇಲಾಖೆಯ ಮೊಬೈಲ್ ಕ್ಲಿನಿಕ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.
ಮಾಹಿತಿ ತಿಳಿದ ಕೂಡಲೇ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗೇಶ್ ನೇತೃತ್ವದ ವೈದ್ಯರ ತಂಡ ಗ್ರಾಮಕ್ಕೆ ಭೇಟಿ ನೀಡಿ ಚಿಕಿತ್ಸೆ ಹಾಗೂ ಮೇಲ್ವಿಚಾರಣೆ ಕೈಗೊಂಡಿದೆ. ಘಟನೆಗೆ ನಿಖರ ಕಾರಣ ಪತ್ತೆಹಚ್ಚಲು ಆಹಾರ ಮತ್ತು ಕುಡಿಯುವ ನೀರಿನ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಗ್ರಾಮಸ್ಥರು ಆತಂಕಪಡದೆ, ಕುದಿಸಿ ಆರಿಸಿದ ನೀರು ಕುಡಿಯುವುದು, ಬಿಸಿ ಆಹಾರ ಸೇವನೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.
ವರದಿ: ನಂದೀಶ್ ನಾಯ್ಕ ಪಿ. ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




