ಸರಗೂರು: ತಾಲೂಕಿನ ನುಗು ಅರಣ್ಯ ವಲಯ ವ್ಯಾಪ್ತಿಯ ಮುಳ್ಳೂರು ಬೆಣ್ಣೆಗೆರೆ ಗ್ರಾಮದ ಜಮೀನೊಂದರಲ್ಲಿ ಶನಿವಾರ ಮಧ್ಯಾಹ್ನ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹುಲಿ ಏಕಾಏಕಿ ದಾಳಿ ನಡೆಸಿ ಗಾಯಗೊಳಿಸಿರುವ ಭೀಕರ ಘಟನೆ ನಡೆದಿದೆ.
ಬೆಣ್ಣೆಗೆರೆ ಗ್ರಾಮದ ಮಾದೇಗೌಡ ಎಂಬುವರ ಮಗ ಕಿರಣ್ (24) ಹುಲಿ ದಾಳಿಯಿಂದ ಗಾಯಗೊಂಡ ಯುವಕ.
ಬೆಣ್ಣೆಗೆರೆ ಗ್ರಾಮದ ರವಿ ಎಂಬುವರ ಬಾಳೆ ತೋಟದಲ್ಲಿ ಕಿರಣ್ ಕೂಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಹೊಂಚು ಹಾಕಿ ಬಂದ ಹುಲಿ, ಕಿರಣ್ ಅವರ ಹಿಂಭಾಗದಿಂದ ಬೆನ್ನಿನ ಮೇಲೆ ತೀವ್ರವಾಗಿ ದಾಳಿ ನಡೆಸಿದೆ. ತಕ್ಷಣವೇ ಜೊತೆಯಲ್ಲಿದ್ದ ಸಹ ಕೂಲಿ ಕಾರ್ಮಿಕರು ಜೋರಾಗಿ ಕಿರುಚಾಡಿಕೊಂಡಿದ್ದರಿಂದ ಹುಲಿ ಕಿರಣ್‌ನನ್ನು ಬಿಟ್ಟು ಓಡಿ ಹೋಗಿದೆ. ಸಹ ಕಾರ್ಮಿಕರ ಸಮಯಪ್ರಜ್ಞೆಯಿಂದ ಕಿರಣ್ ಕ್ಷಣಾರ್ಧದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಗಾಯಾಳು ಕಿರಣ್‌ಗೆ ಪಟ್ಟಣದ ಸ್ವಾಮಿ ವಿವೇಕಾನಂದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದ್ದು, ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನುಗು ವನ್ಯಜೀವಿ ವಲಯದ ಅರಣ್ಯದಂಚಿನಲ್ಲಿರುವ ಈ ಭಾಗದಲ್ಲಿ ಹುಲಿ ಕಾಟ ದಿನೇದಿನೆ ಹೆಚ್ಚಾಗುತ್ತಿದೆ. ಕಳೆದ ಎಂಟು ತಿಂಗಳ ಹಿಂದೆ ಇದೇ ಬೆಣ್ಣೆಗೆರೆ ಗ್ರಾಮದ ರಾಜಶೇಖರ್ (65) ಎಂಬುವರನ್ನು ಹುಲಿ ಬಲಿ ಪಡೆದಿತ್ತು. ಅದೇ ಜಾಗದಲ್ಲಿಯೇ ಈಗ ಮತ್ತೆ ಹುಲಿ ದಾಳಿ ನಡೆಸಿರುವುದು ಗ್ರಾಮಸ್ಥರ ನಿದ್ದೆಗೆಡಿಸಿದೆ. ಮೂರು ತಿಂಗಳ ಹಿಂದೆ ಗ್ರಾಮದ ಜಯಪ್ಪ ಎಂಬುವರ ಹಸುವನ್ನು ಕೊಂದು ತಿಂದಿದ್ದ ಹುಲಿ, ಕಳೆದ ಸೋಮವಾರವೂ ಸಹ ಅದೇ ಜಾಗದಲ್ಲಿ ಜಯಪ್ಪ ಅವರ ಮತ್ತೊಂದು ಹಸುವನ್ನು ಕೊಂದಿರುವುದು ರೈತರಲ್ಲಿ ಆತಂಕ ಇಮ್ಮಡಿಗೊಳಿಸಿದೆ.
ಕಳೆದ ಎರಡು ವಾರಗಳಿಂದಲೇ ಹುಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಲಾಗುತ್ತಿತ್ತಾದರೂ, ಶನಿವಾರ ಘಟನೆ ನಡೆದು ಎರಡು ಗಂಟೆಯಾದರೂ ಅಧಿಕಾರಿಗಳು ಸ್ಥಳಕ್ಕೆ ಬಾರದ್ದಕ್ಕೆ ಗ್ರಾಮಸ್ಥರು ಹಾಗೂ ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲೇ ಪ್ರತಿಭಟನೆಗೆ ಮುಂದಾದ ಗ್ರಾಮಸ್ಥರನ್ನು ಸಮಾಧಾನಪಡಿಸಲು ಸರಗೂರು ಠಾಣೆಯ ಪಿಎಸ್ಐ ಕಿರಣ್ ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಡಿಸಿಎಫ್ (DCF) ಅವರೇ ಸ್ಥಳಕ್ಕೆ ಬರಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದರು.
ಬಳಿಕ ಸ್ಥಳಕ್ಕೆ ಧಾವಿಸಿದ ಎಸಿಎಫ್ (ACF) ಪರಮೇಶ್ ಡಿ. ಅವರಿಗೆ ಮುತ್ತಿಗೆ ಹಾಕಿದ ಮುಖಂಡರು, “ಕಳೆದ 8 ತಿಂಗಳ ಹಿಂದೆಯೇ ಹುಲಿ ರೈತನನ್ನು ಬಲಿ ಪಡೆದಿದೆ, ಸರಣಿ ಜಾನುವಾರುಗಳ ಮಾರಣಹೋಮ ಮಾಡುತ್ತಿದ್ದರೂ ಇಲಾಖೆ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ” ಎಂದು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ತಕ್ಷಣವೇ ಹುಲಿಯನ್ನು ಸೆರೆಹಿಡಿಯಬೇಕು, ಗಾಯಾಳು ಯುವಕನಿಗೆ ಸೂಕ್ತ ಚಿಕಿತ್ಸೆ ಹಾಗೂ ಪರಿಹಾರ ನೀಡಬೇಕು ಮತ್ತು ಬೆಳೆ-ಜಾನುವಾರು ಕಳೆದುಕೊಂಡ ರೈತರಿಗೆ ಸೂಕ್ತ ನಷ್ಟ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥರ ಅಹವಾಲು ಸ್ವೀಕರಿಸಿದ ಎಸಿಎಫ್ ಪರಮೇಶ್ ಮಾತನಾಡಿ, ಇಂದಿನಿಂದಲೇ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತಷ್ಟು ತೀವ್ರವಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಿದ್ದಾರೆ. ಹುಲಿ ದಾಳಿಯಿಂದ ಗಾಯಗೊಂಡ ಯುವಕನಿಗೆ ಇಲಾಖೆಯಿಂದಲೇ ಉಚಿತ ಚಿಕಿತ್ಸೆ ಕೊಡಿಸಲಾಗುವುದು ಹಾಗೂ ಪರಿಹಾರ ನೀಡುವ ಕುರಿತು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸರಗೂರು ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಪ್ರಸನ್ನ ಕುಮಾರ್, ಪಿಎಸ್ಐ ಆರ್. ಕಿರಣ್, ಜಿವಿಕಾ ಸಂಘಟನೆಯ ಮುಖಂಡರಾದ ಮಹೇಶ್, ಲೋಕೇಶ್ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




