ತಿಪಟೂರು: ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಜಿ. ನಾರಾಯಣ್ ಸ್ಪಷ್ಟಪಡಿಸಿದ್ದಾರೆ.
ನಗರದ ಹುಳಿಯಾರು ರಸ್ತೆಯ ಟಿ.ಎಂ. ಮಂಜುನಾಥ ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ‘ಪತ್ರಿಕಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಪತ್ರಕರ್ತರನ್ನು ಸನ್ಮಾನಿಸಿ, ಸಿಹಿ ಹಂಚಿ ಅವರು ಮಾತನಾಡಿದರು. “ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್ ಸಿಕ್ಕರೆ ಪಕ್ಷದ ಪರವಾಗಿ, ಇಲ್ಲವಾದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಂಡಿತ,” ಎಂದು ಅವರು ತಮ್ಮ ರಾಜಕೀಯ ನಿಲುವನ್ನು ಪ್ರಕಟಿಸಿದರು.
ಕಳೆದ 18–19 ವರ್ಷಗಳಿಂದ ತಾಲೂಕಿನ ಜನತೆಯೊಂದಿಗೆ ನಿರಂತರ ಒಡನಾಟ ಹೊಂದಿರುವುದನ್ನು ಸ್ಮರಿಸಿದ ನಾರಾಯಣ್, ಈ ಬಾರಿ ಅಭಿಮಾನಿಗಳ ಆಸೆಯಂತೆ ಜುಲೈ 27ರಂದು ತಮ್ಮ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ 288 ಸರ್ಕಾರಿ ಶಾಲೆಗಳ ಒಟ್ಟು 13,000 ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ, ಕ್ಷೇತ್ರದ 10,000 ಹೆಣ್ಣು ಮಕ್ಕಳಿಗೆ ಜನ್ಮದಿನದ ಅಂಗವಾಗಿ ಬಾಗಿನ ಸಮರ್ಪಣೆ. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 95ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಪ್ರೋತ್ಸಾಹ (ಗೌರವಧನ) ನೀಡಿಕೆ. ತಾಲೂಕಿನ ಪತ್ರಕರ್ತರು, ವಕೀಲರು ಹಾಗೂ ಅಂಗವಿಕಲರಿಗೆ ವಿಶೇಷ ಗೌರವ ಹಾಗೂ ಸನ್ಮಾನ ಸಮಾರಂಭ ಆಯೋಜಿಸುವುದಾಗಿ ಅವರು ತಿಳಿಸಿದರು.
ಈ ಎಲ್ಲಾ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ತಾಲೂಕಿನ ಜನತೆಗೆ ಹತ್ತಿರವಾಗಲು ಮುಂದಾಗಿರುವ ಜಿ. ನಾರಾಯಣ್, ಜನ್ಮದಿನೋತ್ಸವ ಕಾರ್ಯಕ್ರಮಕ್ಕೆ ತಾಲೂಕಿನ ಹಿರಿಯರು, ಕಿರಿಯರು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ವಿರೂಪಾಕ್ಷ, ತಾಲೂಕು ರೈತ ಸಂಘದ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ, ಮುಖಂಡರಾದ ಮಂಜುನಾಥ್, ಚಿದಾನಂದ, ಓಂಕಾರ, ಸುಗಂಧರಾಜು, ಗಂಗಾಧರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


