ನಂಜನಗೂಡು: ಎಲ್ಲ ದಾನಗಳಿಗಿಂತ ಅನ್ನದಾನ, ನೀರಿನ ದಾನ ಹಾಗೂ ವಸ್ತ್ರ ದಾನಗಳು ಅತ್ಯಂತ ದೊಡ್ಡ ದಾನಗಳಾಗಿವೆ ಎಂದು ಹೆಚ್.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು ಅವರ ಧರ್ಮಪತ್ನಿ ಸೌಮ್ಯ ಅನಿಲ್ ಚಿಕ್ಕಮಾದು ತಿಳಿಸಿದರು.
ನಂಜನಗೂಡು ತಾಲೂಕಿನ ಹಳ್ಳಿದಿಡ್ಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಶಾಲಾ ಮಕ್ಕಳ ಮಂತ್ರಿಮಂಡಲದ ಪ್ರಮಾಣವಚನ ಹಾಗೂ ಸಮವಸ್ತ್ರ ವಿತರಣೆ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ದಾನಿಗಳಿಂದ ಸಮವಸ್ತ್ರ ಸೇರಿದಂತೆ ವಿವಿಧ ಸಹಾಯ ಪಡೆದು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು. ವಿದ್ಯಾರ್ಥಿಗಳು ಮೊಬೈಲ್ ಮತ್ತು ಟಿವಿಗಳಿಂದ ದೂರವಿದ್ದಾಗ ಮಾತ್ರ ದಾನ ನೀಡಿದವರಿಗೂ ತೃಪ್ತಿ ಸಿಗುತ್ತದೆ. ಶಾಲೆಯಲ್ಲಿ ಶಿಕ್ಷಕರು ಹೇಳುವ ಪಾಠವನ್ನು ಗಮನವಿಟ್ಟು ಕೇಳಬೇಕು ಹಾಗೂ ಪೋಷಕರು ಸಹ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಮಕ್ಕಳೇ ಈ ದೇಶದ ನಿಜವಾದ ಪ್ರಜೆಗಳು. ನಾನಾಗಲಿ ಅಥವಾ ನಮ್ಮ ಶಾಸಕರಾಗಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಯಾವಾಗಲೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದ್ದೇವೆ. ಈ ಶಾಲೆಯ ಪುಟಾಣಿ ಮಕ್ಕಳಿಗೆ ನನ್ನ ವೈಯಕ್ತಿಕ ವತಿಯಿಂದ ಸಮವಸ್ತ್ರಗಳನ್ನು ವಿತರಿಸಲಾಗಿದ್ದು, ನಮ್ಮ ಕೈಲಾದಷ್ಟು ಸಹಾಯವನ್ನು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಅವರು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಶಾಲಾ ಪುಟಾಣಿ ಮಕ್ಕಳಿಗೆ ಸಮವಸ್ತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರು, ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


