ತುಮಕೂರು: ಜಿಲ್ಲೆಯನ್ನು ಅಭಿವೃದ್ಧಿಯಲ್ಲಿ ದೇಶಕ್ಕೇ ಮಾದರಿಯಾಗಿಸುವ ಗುರಿ ಹೊಂದಿದ್ದು, ನಗರವನ್ನು ಸ್ವಚ್ಛ, ಸುಂದರ ಮತ್ತು ಮಾದರಿ ನಗರವನ್ನಾಗಿ ರೂಪಿಸುವ ಜವಾಬ್ದಾರಿ ಮಹಾನಗರ ಪಾಲಿಕೆ ಹಾಗೂ ಪೌರಕಾರ್ಮಿಕರ ಮೇಲಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಹೇಳಿದರು.
ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 175 ನೇರ ಪಾವತಿ ಪೌರಕಾರ್ಮಿಕರಿಗೆ ಆದೇಶ ಪತ್ರ ವಿತರಣೆ, ಪಿಪಿಪಿ-ಎಲ್ಇಡಿ ಯೋಜನೆಯಡಿ ಹೆಚ್ಚುವರಿ ಬೀದಿದೀಪಗಳ ಅಳವಡಿಕೆ, ಯುಜಿಡಿ ಸಿಬ್ಬಂದಿಗೆ ನಮಸ್ತೆ ಕಿಟ್ಸ್ ವಿತರಣೆ, ಪೌರಕಾರ್ಮಿಕರ ಮಕ್ಕಳಿಗೆ ಲ್ಯಾಪ್ಟಾಪ್ ಹಾಗೂ ಶಾಲಾ ಶುಲ್ಕ ಮರುಪಾವತಿ, ಕಾರ್ಯನಿರತ ಪತ್ರಕರ್ತರಿಗೆ ನಗದುರಹಿತ ಆರೋಗ್ಯ ವಿಮೆ ಸೌಲಭ್ಯ ಮತ್ತು ವಿವಿಧ ಸಿವಿಲ್ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ನಗರದ ವೇಗದ ಅಭಿವೃದ್ಧಿಯನ್ನು ಉಲ್ಲೇಖಿಸಿದ ಅವರು, ತುಮಕೂರು ಶೀಘ್ರದಲ್ಲೇ ಬೆಂಗಳೂರಿನ ವಿಸ್ತರಣೆಯ ಭಾಗವಾಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ 14 ಪಂಚಾಯಿತಿಗಳನ್ನು ಮಹಾನಗರ ಪಾಲಿಕೆಗೆ ಸೇರಿಸಿ ನಗರವನ್ನು ಇನ್ನಷ್ಟು ವಿಸ್ತರಿಸುವ ಯೋಜನೆಯಿದೆ. ರಸ್ತೆ, ಚರಂಡಿ, ಬೀದಿದೀಪ ಹಾಗೂ 18 ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿವೆ.
— ಡಾ. ಜಿ. ಪರಮೇಶ್ವರ, ಡಿಸಿಎಂ
ರಾಜ್ಯ ಸರ್ಕಾರ ಕಳೆದ 10–15 ವರ್ಷಗಳಿಂದ ನಗರಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರ ಬದುಕು ಸುಧಾರಿಸಲು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ನಾನು ಬೆಂಗಳೂರು ಉಸ್ತುವಾರಿಯಾಗಿದ್ದ ವೇಳೆ ಪೌರಕಾರ್ಮಿಕರ ವೇತನ ಹೆಚ್ಚಿಸಿ, ಅನೇಕ ಜನರನ್ನು ಕಾಯಂ ಸೇವೆಗೆ ಸೇರಿಸುವ ಮೂಲಕ ಅವರ ಜೀವನಮಟ್ಟವನ್ನು ಉತ್ತಮಗೊಳಿಸಲಾಗಿತ್ತು ಎಂದು ತಿಳಿಸಿದರು.
ತುಮಕೂರು ಮಹಾನಗರ ಪಾಲಿಕೆಯೂ ಕಳೆದ ವರ್ಷ ಅನೇಕ ಪೌರಕಾರ್ಮಿಕರನ್ನು ಕಾಯಂ ಸೇವೆಗೆ ಸೇರಿಸಿದ್ದು, ಇದೇ ರೀತಿಯ ಕ್ರಮ ಮುಂದುವರಿದಿದೆ. ಪ್ರತಿಯೊಬ್ಬ ಪೌರಕಾರ್ಮಿಕರೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ನಗರವನ್ನು ಅಚ್ಚುಕಟ್ಟಾಗಿ, ಸ್ವಚ್ಛವಾಗಿ ಕಾಪಾಡಬೇಕು ಎಂದು ಕರೆ ನೀಡಿದರು.
ಮೈಸೂರು ದೇಶಕ್ಕೆ ಅಚ್ಚುಕಟ್ಟಾಗಿ, ಸ್ವಚ್ಛತೆಯಲ್ಲಿ ಮೊದಲನೇ ಸ್ಥಾನದಲ್ಲಿದೆ ಅದರಂತೆ ಜಿಲ್ಲೆಯನ್ನು ಸ್ವಚ್ಛತೆ, ಹಸಿರು ಮತ್ತು ಸುಂದರ ನಗರ ನಿರ್ಮಾಣದಿಂದಲೇ ಉತ್ತಮ ಹೆಸರು ದೊರೆಯುತ್ತದೆ. ಹೊರಗಿನಿಂದ ಬರುವವರು ತುಮಕೂರಿನ ಬದಲಾವಣೆಯನ್ನು ಗಮನಿಸುವಷ್ಟು ಅಭಿವೃದ್ಧಿಯಾಗಿದೆ. ಇನ್ನಷ್ಟು ಗಿಡಗಳನ್ನು ನೆಟ್ಟು, ಸ್ವಚ್ಛತೆಯನ್ನು ಕಾಪಾಡಿದರೆ ತುಮಕೂರು ದೇಶದ ಗಮನ ಸೆಳೆಯುವ ನಗರವಾಗಲಿದೆ ಎಂದರು. ಹೇಮಾವತಿ ನೀರು ಜಿಲ್ಲೆಗೆ ಪೂರೈಕೆಯಾಗುತ್ತಿದೆ. ಎತ್ತಿನಹೊಳೆ ಯೋಜನೆಯ ನೀರು ಕೂಡ ಸೇರಿದರೆ ಜಿಲ್ಲೆಯ ಅಭಿವೃದ್ಧಿಗೆ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಅರಣ್ಯ ಇಲಾಖೆ ಕೇಂದ್ರ ಸರ್ಕಾರದ ಸಹಕಾರದಿಂದ ನೀರು ಪೂರೈಕೆಯ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.
ಈ ವೇಳೆ ಆಯುಕ್ತರು ಶುಭ, ಶಾಸಕ ಜಿ.ಬಿ. ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ. ಅಶ್ವಿಜ, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ. ಅಶೋಕ್, ಬಿ.ಎಂ.ಟಿ.ಸಿ. ಉಪಾಧ್ಯಕ್ಷ ನಿಕೇತ್ ರಾಜ್ ಎಂ., ಯೋಗಾನಂದ ಸೇರಿದಂತೆ ಅನೇಕ ಗಣ್ಯರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


