ಎಷ್ಟೇ ಬಗೆಯ ಸಾಂಬಾರ್, ಪಲ್ಯಗಳಿದ್ದರೂ, ಬಿಸಿ ಬಿಸಿ ಅನ್ನಕ್ಕೆ ಒಂದು ಚಮಚ ಚಟ್ನಿ ಮತ್ತು ಸ್ವಲ್ಪ ಕೊಬ್ಬರಿ ಎಣ್ಣೆ ಸೇರಿಸಿ ಕಲಸಿ ತಿಂದರೆ ಸಿಗುವ ತೃಪ್ತಿಯೇ ಬೇರೆ. 6 ಚಟ್ನಿ ರೆಸಿಪಿಗಳ ವಿವರ ಇಲ್ಲಿದೆ:
ಕರಿಬೇವಿನ ಚಟ್ನಿ:
ಕರಿಬೇವಿನಲ್ಲಿ ಕಬ್ಬಿಣಾಂಶ, ಆಂಟಿಆಕ್ಸಿಡೆಂಟ್ ಗಳು ಮತ್ತು ಫೈಬರ್ ಸಮೃದ್ಧವಾಗಿದೆ.
ಬೇಕಾಗುವ ಸಾಮಗ್ರಿಗಳು: 2 ಕಪ್ ಕರಿಬೇವು, 1 ಕಪ್ ತುರಿದ ಕಾಯಿತುರಿ, 5 ಒಣಮೆಣಸಿನಕಾಯಿ, ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು, 3 ಎಸಳು ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, 1 ಟೀಸ್ಪೂನ್ ಕೊಬ್ಬರಿ ಎಣ್ಣೆ.
ತಯಾರಿಸುವ ವಿಧಾನ: ಬಾಣಲೆಯಲ್ಲಿ ಕೊಬ್ಬರಿ ಎಣ್ಣೆ ಬಿಸಿ ಮಾಡಿ ಕರಿಬೇವು ಮತ್ತು ಒಣಮೆಣಸಿನಕಾಯಿಯನ್ನು ಲಘುವಾಗಿ ಹುರಿಯಿರಿ. ನಂತರ ಕಾಯಿತುರಿ, ಹುಣಿಸೇಹಣ್ಣು, ಬೆಳ್ಳುಳ್ಳಿ ಮತ್ತು ಉಪ್ಪು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ.
ಟೊಮೆಟೊ–ಬೆಳ್ಳುಳ್ಳಿ ಚಟ್ನಿ
ಮನೆಯಲ್ಲಿ ಯಾವುದೇ ತರಕಾರಿ ಇಲ್ಲದ ದಿನಗಳಲ್ಲಿ ಅನ್ನದ ಜೊತೆ ಸವಿಯಲು ಇದು ಅತ್ಯುತ್ತಮ.
ಬೇಕಾಗುವ ಸಾಮಗ್ರಿಗಳು: 4 ಹಣ್ಣಾದ ಟೊಮೆಟೊ, 8 ಎಸಳು ಬೆಳ್ಳುಳ್ಳಿ, 6 ಒಣಮೆಣಸಿನಕಾಯಿ, 5 ಸಣ್ಣ ಈರುಳ್ಳಿ (ಶಾಲೆಟ್ಸ್), ಉಪ್ಪು, 1 ಟೇಬಲ್ ಚಮಚ ಕೊಬ್ಬರಿ ಎಣ್ಣೆ.
ತಯಾರಿಸುವ ವಿಧಾನ: ಎಣ್ಣೆಯಲ್ಲಿ ಬೆಳ್ಳುಳ್ಳಿ, ಈರುಳ್ಳಿ, ಒಣಮೆಣಸಿನಕಾಯಿ ಹುರಿದು, ನಂತರ ಟೊಮೆಟೊ ಸೇರಿಸಿ ಚೆನ್ನಾಗಿ ಬೇಯಿಸಿ. ತಣ್ಣಗಾದ ಮೇಲೆ ಉಪ್ಪು ಸೇರಿಸಿ ರುಬ್ಬಿ. ಇದು ಅನ್ನ ಮಾತ್ರವಲ್ಲದೆ ದೋಸೆ, ಚಪಾತಿಗೂ ಸೂಪರ್ ಕಾಂಬಿನೇಷನ್.
ಹಸಿ ಮಾವಿನಕಾಯಿ ಚಟ್ನಿ
ಮಾವಿನಕಾಯಿಯ ಹುಳಿ ಮತ್ತು ಕಾಯಿಯ ಮೃದುತ್ವದ ರುಚಿ ಅನ್ನದ ಸವಿಯನ್ನು ಹೆಚ್ಚಿಸುತ್ತದೆ.
ಬೇಕಾಗುವ ಸಾಮಗ್ರಿಗಳು: 1 ಹಸಿ ಮಾವಿನಕಾಯಿ, 1 ಕಪ್ ಕಾಯಿತುರಿ, 2 ಹಸಿಮೆಣಸಿನಕಾಯಿ, 4 ಸಣ್ಣ ಈರುಳ್ಳಿ, ಉಪ್ಪು.
ತಯಾರಿಸುವ ವಿಧಾನ: ಮಾವಿನಕಾಯಿ ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಎಲ್ಲಾ ಸಾಮಗ್ರಿಗಳನ್ನು ಒಟ್ಟಿಗೆ ಸೇರಿಸಿ ರುಬ್ಬಿಕೊಳ್ಳಿ. ಕೊನೆಯಲ್ಲಿ ಸ್ವಲ್ಪ ಕೊಬ್ಬರಿ ಎಣ್ಣೆ ಸೇರಿಸಿ ಅನ್ನದೊಂದಿಗೆ ಸವಿಯಿರಿ.
ಮೆಂತ್ಯ ಚಟ್ನಿ:
ಬೇಕಾಗುವ ಸಾಮಗ್ರಿಗಳು: 1 ಟೀಸ್ಪೂನ್ ಮೆಂತ್ಯ ಕಾಳು, 1 ಕಪ್ ಕಾಯಿತುರಿ, 4 ಒಣಮೆಣಸಿನಕಾಯಿ, ಸಣ್ಣ ತುಂಡು ಹುಣಿಸೇಹಣ್ಣು, ಉಪ್ಪು.
ತಯಾರಿಸುವ ವಿಧಾನ: ಮೆಂತ್ಯವನ್ನು ಲಘುವಾಗಿ ಹುರಿದುಕೊಳ್ಳಿ (ಹೆಚ್ಚು ಹುರಿದರೆ ಕಹಿಯಾಗುತ್ತದೆ). ನಂತರ ಕಾಯಿತುರಿ, ಒಣಮೆಣಸಿನಕಾಯಿ, ಹುಣಿಸೇಹಣ್ಣು ಮತ್ತು ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ.
ಗಾಂಧಾರಿ ಮೆಣಸಿನಕಾಯಿ ಚಟ್ನಿ:
ಗಾಂಧಾರಿ ಮೆಣಸಿನ ಚಟ್ನಿ ಕರಾವಳಿ ಭಾಗದ ಜನರ ಅಚ್ಚುಮೆಚ್ಚಿನ ಚಟ್ನಿಯಾಗಿದೆ. ಇದು ಬಾಂಬೆ ಮೆಣಸಿನಕಾಯಿ ಮಾದರಿಯ ಸಣ್ಣ ತೀವ್ರ ಖಾರದ ಮೆಣಸಾಗಿದೆ.
ಬೇಕಾಗುವ ಸಾಮಗ್ರಿಗಳು: 15 ಗಾಂಧಾರಿ ಹಸಿಮೆಣಸಿನಕಾಯಿ, 1 ಕಪ್ ಕಾಯಿತುರಿ, 10 ಸಣ್ಣ ಈರುಳ್ಳಿ, ಉಪ್ಪು, 1 ಟೇಬಲ್ ಚಮಚ ಕೊಬ್ಬರಿ ಎಣ್ಣೆ.
ತಯಾರಿಸುವ ವಿಧಾನ: ಎಲ್ಲಾ ಸಾಮಗ್ರಿಗಳನ್ನು ಒಟ್ಟಿಗೆ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಬಿಸಿ ಗಂಜಿ (ಅನ್ನದ ತಿಳಿ) ಅಥವಾ ಬಿಸಿ ಅನ್ನಕ್ಕೆ ಇದು ಅದ್ಭುತ ಜೊತೆಗಾರ.
ಈರುಳ್ಳಿ ಚಟ್ನಿ
ಅತಿ ಕಡಿಮೆ ಸಾಮಗ್ರಿಗಳಲ್ಲಿ ತಟ್ಟನೆ ಮಾಡಬಹುದಾದ ಚಟ್ನಿ.
ಬೇಕಾಗುವ ಸಾಮಗ್ರಿಗಳು: 20 ಸಣ್ಣ ಈರುಳ್ಳಿ, 5 ಒಣಮೆಣಸಿನಕಾಯಿ, ಅರ್ಧ ಕಪ್ ಕಾಯಿತುರಿ, ಉಪ್ಪು.
ತಯಾರಿಸುವ ವಿಧಾನ: ಈರುಳ್ಳಿಯನ್ನು ಲಘುವಾಗಿ ಹುರಿದು, ಉಳಿದ ಸಾಮಗ್ರಿಗಳೊಂದಿಗೆ ಸೇರಿಸಿ ರುಬ್ಬಿ. ಇದು ಅನ್ನ, ಇಡ್ಲಿ ಮತ್ತು ದೋಸೆಗೆ ಸೂಕ್ತವಾಗಿದೆ.
ರುಚಿ ಹೆಚ್ಚಿಸಲು ಟಿಪ್ಸ್:
ಚಟ್ನಿ ರುಬ್ಬುವಾಗ ಅಥವಾ ರುಬ್ಬಿದ ನಂತರ ಸ್ವಲ್ಪ ಹಸಿ ಕೊಬ್ಬರಿ ಎಣ್ಣೆ ಸೇರಿಸಿದರೆ ಸುವಾಸನೆ ಮತ್ತು ರುಚಿ ಹೆಚ್ಚುತ್ತದೆ.
ಒಣಮೆಣಸಿನಕಾಯಿಯನ್ನು ಎಣ್ಣೆಯಲ್ಲಿ ಹುರಿದು ಬಳಸುವುದರಿಂದ ಉತ್ತಮ ಪರಿಮಳ ಸಿಗುತ್ತದೆ.
ಸಾಧ್ಯವಾದರೆ ಕಲ್ಲಿನಲ್ಲಿ (ಅಮ್ಮಿಕಲ್ಲು) ಚಟ್ನಿ ಅರೆದರೆ ಸಾಂಪ್ರದಾಯಿಕ ಕಂಪು ಮತ್ತು ಸ್ವಾದವನ್ನು ಸವಿಯಬಹುದು.
ದಿನಾಲೂ ಒಂದೇ ಬಗೆಯ ಸಾಂಬಾರ್ ತಿಂದು ಬೇಸತ್ತವರಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ, ಕನಿಷ್ಠ ಸಮಯದಲ್ಲಿ ತಯಾರಾಗುವ ಈ ಚಟ್ನಿಗಳು ಮಧ್ಯಾಹ್ನದ ಊಟಕ್ಕೆ ಹೊಸ ಕಳೆ ತರುತ್ತವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


