ಕೊಪ್ಪಳ: ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಮತ ನೀಡಿದರೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಐದೂ ಗ್ಯಾರಂಟಿ ಯೋಜನೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ ಎಂದು ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, “ಬಿಜೆಪಿಯವರಿಗೆ ವೋಟು ಹಾಕಿದರೆ ಗೃಹಲಕ್ಷ್ಮಿ ಯೋಜನೆಯ 2,000 ರೂಪಾಯಿ, ಅನ್ನಭಾಗ್ಯ, ಮಹಿಳೆಯರ ಉಚಿತ ಬಸ್ ಪ್ರಯಾಣ (ಶಕ್ತಿ ಯೋಜನೆ) ಹಾಗೂ ಯುವನಿಧಿ ಸೇರಿದಂತೆ ಎಲ್ಲಾ ಗ್ಯಾರಂಟಿ ಯೋಜನೆಗಳು ನೂರಕ್ಕೆ ನೂರರಷ್ಟು ಬಂದ್ ಆಗಲಿವೆ” ಎಂದು ಹೇಳಿದರು.
“ಬಿಜೆಪಿಯವರು ಅದಾನಿ, ಅಂಬಾನಿಯಂತಹ ಉದ್ಯಮಿಗಳ ಸಾಲ ಮನ್ನಾ ಮಾಡುತ್ತಾರೆ. ಆದರೆ ಸಾಮಾನ್ಯ ಜನರು ಮತ್ತು ರೈತರ ಸಾಲವನ್ನೇಕೆ ಮನ್ನಾ ಮಾಡುವುದಿಲ್ಲ? ಅವರಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಮೊದಲು ರೈತರ ಸಾಲ ಮನ್ನಾ ಮಾಡಲಿ. ನಾನು ಕೇವಲ ಮತಕ್ಕಾಗಿ ಈ ಮಾತು ಹೇಳುತ್ತಿಲ್ಲ, ನಾವು ಕೊಟ್ಟ ಮಾತಿನಂತೆ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ”
— ಶಿವರಾಜ್ ತಂಗಡಗಿ
“ಈ ಹಿಂದೆ ಕಾಂಗ್ರೆಸ್ ಹೇಗೆ ಗ್ಯಾರಂಟಿ ನೀಡುತ್ತದೆ ಎಂದು ಬಿಜೆಪಿಯವರು ವ್ಯಂಗ್ಯವಾಡಿದ್ದರು. ಈಗ ಎಲ್ಲಾ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ. ಅವರಿಂದ ಬಸ್ ಕೊಡಲು ಸಾಧ್ಯವಿಲ್ಲ, ಆದರೆ ನಾವು ಬಸ್ ಕೊಟ್ಟಿದ್ದೇವೆ; ನಿಮ್ಮ ಕೈಗೆ ಸ್ಟೇರಿಂಗ್ ಮಾತ್ರ ಕೊಟ್ಟಿಲ್ಲ ಅಷ್ಟೇ” ಎಂದು ಚಟಾಕಿ ಹಾರಿಸಿದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ನಾಯಕರಿಗೆ ನೇರ ಸವಾಲು ಹಾಕಿದ ತಂಗಡಗಿ, “ನಾವು ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುತ್ತೇವೆ ಎಂದು ಹೇಳುವ ತಾಕತ್ತು ಬಿಜೆಪಿಯವರಿಗೆ ಇದೆಯೇ?” ಎಂದು ಪ್ರಶ್ನಿಸಿದರು.
ಇದೇ ವೇಳೆ, “ಸಚಿವನಾದ ಮೇಲೆ ಯಾರ ಕೈಗೂ ಸಿಗುವುದಿಲ್ಲ ಎಂದು ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನಾನು ಸಚಿವನಾದ ಮೇಲೂ ವಾರದಲ್ಲಿ 2–3 ದಿನ ಕ್ಷೇತ್ರದಲ್ಲೇ ಇದ್ದು ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದೇನೆ” ಎಂದು ಸ್ಪಷ್ಟಪಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
