ಚಿಕ್ಕಬಳ್ಳಾಪುರ: ಸದಾ ತಮ್ಮ ವಿಭಿನ್ನ ಕಾರ್ಯವೈಖರಿ ಮತ್ತು ಮಾತುಗಳಿಂದ ಸುದ್ದಿಯಲ್ಲಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಬಲಗಾಲಿನ ಮೂಳೆ ಮುರಿತಕ್ಕೊಳಗಾಗಿದ್ದು, ವೈದ್ಯರು ಕನಿಷ್ಠ ಆರು ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ (ಬೆಡ್ ರೆಸ್ಟ್) ಪಡೆಯುವಂತೆ ಕಟ್ಟುನಿಟ್ಟಿನ ಸಲಹೆ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ತಮ್ಮ ನಿವಾಸದ ಮೆಟ್ಟಿಲುಗಳನ್ನು ಇಳಿಯುವಾಗ ಕಾಲು ಜಾರಿ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ. ತಕ್ಷಣವೇ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅವರು, ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಈ ಕುರಿತು ಸ್ವತಃ ಶಾಸಕರೇ ತಮ್ಮ ಸಾಮಾಜಿಕ ಜಾಲತಾಣ (X) ಖಾತೆಯಲ್ಲಿ ಫೋಟೋ ಸಮೇತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದರೂ ಪ್ರದೀಪ್ ಈಶ್ವರ್ ಅವರು ತಮ್ಮ ಕರ್ತವ್ಯವನ್ನು ನಿಲ್ಲಿಸಿಲ್ಲ. “ನನ್ನೊಳಗಿರುವ ಶಿಕ್ಷಕ ಮತ್ತು ಆಡಳಿತಗಾರ ಸುಮ್ಮನೆ ಕೂರಲು ಬಿಡುವುದಿಲ್ಲ. ಕೆಲಸ ಆಗಲೇಬೇಕು ಎಂದಾದಾಗ ಅದನ್ನು ಸಾಧಿಸಲು ದಾರಿಯೊಂದನ್ನು ಕಂಡುಕೊಳ್ಳಲೇಬೇಕು” ಎಂದು ಬರೆದುಕೊಂಡಿರುವ ಅವರು, ತರಗತಿ ಕೊಠಡಿಯೊಳಗೇ ಹಾಸಿಗೆಯ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡು ಹಾಸಿಗೆಯ ಮೇಲೆ ಕುಳಿತೇ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ ಪಾಠ ಮಾಡುತ್ತಿದ್ದಾರೆ. ಇದರ ಜೊತೆಗೆ, ಕ್ಷೇತ್ರದ ಜನರ ಸಮಸ್ಯೆಗಳು ಹಾಗೂ ಆಡಳಿತಾತ್ಮಕ ಕೆಲಸಗಳನ್ನೂ ಕುಳಿತಲ್ಲಿಂದಲೇ ನಿರ್ವಹಿಸುತ್ತಿದ್ದಾರೆ.
“ಸಂದರ್ಭಗಳು ನಮ್ಮ ವೇಗವನ್ನು ಕಡಿಮೆ ಮಾಡಬಹುದೇ ಹೊರತು, ನಾವು ನಂಬಿದ ಕೆಲಸ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ. ಕಾಲಿಗೆ ಪೆಟ್ಟಾಗಿದೆಯಷ್ಟೇ, ಕೆಲಸ ಮಾಡಬೇಕೆನ್ನುವ ನನ್ನ ಉತ್ಸಾಹ ಕುಗ್ಗಿಲ್ಲ. ಕಾಯಕವೇ ಕೈಲಾಸ!” ಎಂದು ಪ್ರದೀಪ್ ಈಶ್ವರ್ ತಮ್ಮ ಆತ್ಮವಿಶ್ವಾಸದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
