ತುಮಕೂರು: ನಗರದ ವಿವಿಧ ಪ್ರದೇಶಗಳಲ್ಲಿ ನಗರ ಪಾಲಿಕೆ ಅಧಿಕಾರಿಗಳು ಫುಟ್ ಪಾತ್ ಅಂಗಡಿಗಳ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ. ಫುಟ್ ಪಾತ್ ವ್ಯಾಪಾರಿಗಳಿಗೆ ಪರ್ಯಾಯ ಸ್ಥಳದ ವ್ಯವಸ್ಥೆ ಮಾಡದೆ ಅವರನ್ನು ತೆರವು ಮಾಡಿಸಬಾರದೆಂದು ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಎಂ.ಗೋಪಿ ಮನವಿ ಮಾಡಿದ್ದಾರೆ.
ನಗರದೆಲ್ಲೆಡೆ ಸುಮಾರು 5 ಸಾವಿರಕ್ಕೂ ಹೆಚ್ಚು ಫುಟ್ ಪಾತ್ ವ್ಯಾಪಾರಿಗಳು ಹಲವಾರು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಈಗ ಏಕಾಏಕಿ ಅವರನ್ನು ಎತ್ತಂಗಡಿ ಮಾಡಿದರೆ ಅವರ ಬದುಕು ಬೀದಿಪಾಲಾಗುತ್ತದೆ. ಎಷ್ಟೋ ಜನ ಫುಟ್ಪಾತ್ ವ್ಯಾಪಾರಿಗಳು ಪ್ರಧಾನ ಮಂತ್ರಿಗಳ ಯೋಜನೆಯಡಿ ಸಾಲ ಪಡೆದಿದ್ದಾರೆ, ಖಾಸಗಿ ಸಂಸ್ಥೆಗಳಿಂದ ಸಾಲ ಪಡೆದು ವ್ಯವಹಾರ ನಡೆಸುತ್ತಿದ್ದಾರೆ. ಈಗ ತೆರವು ಮಾಡಿದರೆ ಸಾಲ ಮರುಪಾವತಿಗೆ ಹಾಗೂ ಜೀವನ ನಿರ್ವಹಣೆಗೆ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ಆರ್ಥಿಕವಾಗಿ ದುರ್ಬಲರಾಗಿರುವವರು, ಅನೇಕ ವಿಕಲಚೇತನರು ಫುಟ್ಪಾತ್ನಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಈಗ ಅವರನ್ನು ಜಾಗ ಖಾಲಿ ಮಾಡಿಸಿದರೆ ಅವರ ಜೀವನ ಅಸ್ತವ್ಯಸ್ತವಾಗುತ್ತದೆ. ಫುಟ್ಪಾತ್ ವ್ಯಾಪಾರಿಗಳ ಬದುಕು ರಕ್ಷಣೆ ಮಾಡಲು ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಎಂ.ಗೋಪಿ ವಿನಂತಿ ಮಾಡಿದ್ದಾರೆ. ಸಂಘದ ರಾಜ್ಯ ಉಪಾಧ್ಯಕ್ಷ ಆದಿಲ್ ಪಾಷಾ, ಪ್ರಧಾನ ಕಾರ್ಯದರ್ಶಿ ರಾಜಣ್ಣ, ಮಹಿಳಾ ಘಟಕ ಅಧ್ಯಕ್ಷೆ ಜಿ. ರಮ್ಯಶ್ರೀ ಅವರು ಫುಟ್ಪಾತ್ ವ್ಯಾಪಾರ ತೆರವು ಮಾಡದಂತೆ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


