ಮಂಡ್ಯ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದು, ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ಆಯೋಜಿಸಲಾಗಿದ್ದ ದಿ. ಕೆ.ಆರ್. ಪೇಟೆ ಕೃಷ್ಣ ಅವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮ್ಮ ಈ ನಿರ್ಧಾರವನ್ನು ಪ್ರಕಟಿಸಿದರು.
ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳು ಹಾಗೂ ಬೆಂಬಲಿಗರು ಕನಿಷ್ಠ ಮುಂದಿನ 10 ವರ್ಷಗಳ ಕಾಲ ಚುನಾವಣಾ ರಾಜಕೀಯದಲ್ಲೇ ಮುಂದುವರಿಯುವಂತೆ ಮನವಿ ಮಾಡಿಕೊಂಡರು. ಆದರೆ, ಅವರ ವಿನಂತಿಗೆ ಸ್ಪಂದಿಸಿದ ಸಿದ್ದರಾಮಯ್ಯ, “2028ರ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದಿಲ್ಲ” ಎಂದು ಖಡಾಖಂಡಿತವಾಗಿ ತಿಳಿಸಿದರು.
ಮೇ 28 ರಂದು ಹೈಕಮಾಂಡ್ ಹಾಗೂ ರಾಹುಲ್ ಗಾಂಧಿ ಅವರ ಸೂಚನೆಯಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿದ್ದರಾಮಯ್ಯ ಅವರ ಎರಡನೇ ಅವಧಿಯ ಆಡಳಿತ ಅಂತ್ಯಗೊಂಡಿತ್ತು. ಇದೀಗ ಚುನಾವಣಾ ರಾಜಕೀಯದಿಂದಲೂ ದೂರ ಉಳಿಯುವುದಾಗಿ ಹೇಳುವ ಮೂಲಕ ತಮ್ಮ ಐದು ದಶಕಗಳ ಸುದೀರ್ಘ ರಾಜಕೀಯ ಪಯಣಕ್ಕೆ ತೆರೆ ಎಳೆಯುವ ಸುಳಿವು ನೀಡಿದ್ದಾರೆ.
ಮೈಸೂರಿನ ಮಣ್ಣಿನಲ್ಲಿ ಬೆಳೆದು, ಹಿಂದುಳಿದ ವರ್ಗಗಳ ಹಾಗೂ ಶೋಷಿತರ ಧ್ವನಿಯಾಗಿ ಐದು ದಶಕಗಳ ಕಾಲ ರಾಜಕಾರಣ ನಡೆಸಿದ ಸಿದ್ದರಾಮಯ್ಯ ಅವರ ಈ ನಿರ್ಧಾರ ಅಭಿಮಾನಿಗಳಲ್ಲಿ ಹಾಗೂ ಬೆಂಬಲಿಗರಲ್ಲಿ ತೀವ್ರ ಬೇಸರ ಮೂಡಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
