ಔರಾದ್ (ಬೀದರ್): ಸರ್ಕಾರಿ ಶಾಲೆಯಲ್ಲಿ ಓದುವ ಬಡ ಕುಟುಂಬದ ಮಕ್ಕಳಿಗೆ ನೆರವಾಗುವುದು ಅತ್ಯಂತ ಶ್ಲಾಘನೀಯ ಕಾರ್ಯ. ಬಡವರಿಗೆ ಸಹಾಯ ಮಾಡುವುದು ಎಂದರೆ ದೇವರಿಗೆ ಸಾಲ ಕೊಟ್ಟಂತೆ ಎಂದು ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಇಮ್ಯಾನುವೆಲ್ (ಬಂಟಿ) ದರ್ಬಾರೆ ಹೇಳಿದರು.
ಪಟ್ಟಣದ ಹರಿಜನವಾಡದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿನಿ ಕುಮಾರಿ ಛಾಯಾ ಅಶೋಕ ತಾರೆ ಅವರು ತಮ್ಮ ಬೌದ್ಧವಾಸಿ ತಂದೆ-ತಾಯಿ ತೇಜಮ್ಮ ತಾರೆ ಹಾಗೂ ಅಶೋಕ ತಾರೆ ಅವರ ಪುಣ್ಯನುಮೋದನೆ ಅಂಗವಾಗಿ ಶಾಲಾ ಮಕ್ಕಳಿಗೆ ನೋಟ್‌ಬುಕ್ ಸೇರಿದಂತೆ ವಿವಿಧ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.
ಕಳೆದ ಐದು ವರ್ಷಗಳಿಂದ ವಿದ್ಯಾರ್ಥಿಗಳ ಇಡೀ ವರ್ಷದ ವಿದ್ಯಾಭ್ಯಾಸಕ್ಕೆ ಬೇಕಾಗುವ ನೋಟ್‌ಬುಕ್, ಡಿಕ್ಷನರಿ, ಅಂಕಲಿಪಿ, ಪೆನ್ಸಿಲ್, ಸ್ಕೇಲ್, ಶಾರ್ಪ್‌ನರ್ ಸೇರಿದಂತೆ ವಿವಿಧ ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತಾ ಬರಲಾಗುತ್ತಿದೆ. ಮಕ್ಕಳಲ್ಲಿ ಶಿಸ್ತು ಬೆಳೆಯಬೇಕು, ಜೀವನದಲ್ಲಿ ಉನ್ನತ ಮಟ್ಟಕ್ಕೆ ತಲುಪಲು ಶಿಸ್ತು ಅತ್ಯಂತ ಮುಖ್ಯ ಎಂದು ಉಡುಪಿಯ ನಕ್ಸಲ್ ನಿಗ್ರಹ ದಳದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಅನಿಲ್ ತಾರೆ ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಗಜಾನನ ಮಳ್ಳ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಮಹಾತ್ಮಾ ಗಾಂಧೀಜಿ ಅವರಂತಹ ಮಹನೀಯರು ಇಡೀ ಸಮಾಜಕ್ಕಾಗಿ ಬದುಕಿದವರು. ತನಗಾಗಿ ಮಾತ್ರ ಬದುಕಿದವರು ಕಾಲಕ್ರಮೇಣ ಅಳಿಸಿ ಹೋಗುತ್ತಾರೆ; ಆದರೆ ಸಮಾಜದ ಹಿತಕ್ಕಾಗಿ ಶ್ರಮಿಸಿದವರು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರುಗಳಾದ ವಿಜಯಕುಮಾರ ವಹಿಸಿಕೊಂಡಿದ್ದರು. ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರರ ಸಂಘದ ಸಂಸ್ಥಾಪಕರಾದ ರವಿ ಡೋಳೆ, ಗಣೇಶಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಕಾಶೀನಾಥ ಬಿರಾದಾರ, ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಅನಿಲ್ ತಾರೆ, ಸುಧಾಕರ ಸಕ್ಪಾಲ್, ಗೋವಿಂದ್ ಶಿಂದೆ ಹಾಗೂ ಮಾಯದೇವಿ ದಿನೇಶ ಉಪಸ್ಥಿತರಿದ್ದರು.
ಶಿಕ್ಷಕಿ ಕಮಲಾ ಕಾರ್ಯಕ್ರಮ ನಿರೂಪಿಸಿದರು ಹಾಗೂ ಶಿಕ್ಷಕಿ ಮಹಾದೇವಿ ವಂದಿಸಿದರು.
ವರದಿ: ಅರವಿಂದ ಮಲ್ಲೀಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
