ತುಮಕೂರು(Namma Tumakuru) : ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ಸ್ ನೀರು ಬಿಡಬೇಕೆಂದು ಕಾವೇರಿ ನೀರು ನಿಯಂತ್ರಣ ಸಮಿತಿ ಮಾಡಿರುವ ಶಿಫಾರಸ್ಸಿಗೆ ಕನ್ನಡಪರ ಸಂಘಟನೆಗಳ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ. ನಮ್ಮ ನೀರನ್ನು ಉಳಿಸಿಕೊಳ್ಳಲು, ಕಾವೇರಿ ಸಮಿತಿ ಶಿಫಾರಸು ವಿರೋಧಿಸಿ ರಾಜ್ಯ ಸಂಘಟನೆಗಳು ರೂಪಿಸುವ ಹೋರಾಟವನ್ನು ಬೆಂಬಲಿಸಿ ಹೋರಾಟ ನಡೆಸಲು ಒಕ್ಕೂಟದ ಮುಖಂಡರು ತೀರ್ಮಾನ ಮಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಪ್ರಮುಖರು ಶುಕ್ರವಾರ ಸಭೆ ಸೇರಿ ಕಾವೇರಿ ನೀರು ಹೋರಾಟ ಕುರಿತು ಚರ್ಚಿಸಿದರು. ಕನ್ನಡ ಸೇನೆ ಜಿಲ್ಲಾಧ್ಯಕ್ಷ ಡಾ.ಧನಿಯಾಕುಮಾರ್ ಮಾತನಾಡಿ ಮಳೆ ಬೀಳದೆ ನಮ್ಮಲ್ಲಿ ಕುಡಿಯುವ ನೀರಿಗೂ ಕಹಾಕಾರ ಉಂಟಾಗಿರುವಾಗ, ಜಲಾಶಯಗಳು ಬತ್ತಿ ಹೋಗಿರುವಾಗ ತಮಿಳುನಾಡಿಗೆ ಪ್ರತಿದಿನ 3500 ಕ್ಯೂಸೆಕ್ ನೀರು ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಮಾಡಿರುವ ಶಿಫಾರಸು ಅಮಾನವೀಯ. ಸರ್ಕಾರ ಈ ಶಿಫಾರಸ್ಸನ್ನು ತಿರಸ್ಕರಿಸಿ ನಾಡಿನ ಜನರ ರಕ್ಷಣೆಗೆ ಬದ್ಧತೆ ತೋರಬೇಕು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಮಾತನಾಡಿ, ಕಾವೇರಿ ನೀರು ನಿಯಂತ್ರಣ ಮಂಡಳಿಯ ಆದೇಶ ರಾಜ್ಯದ ಜನರಿಗೆ ಬರೆ ಎಳೆದಂತಾಗಿದೆ. ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯೂ ತಿರಸ್ಕೃತಗೊಂಡಿದೆ. ಈಗ ಸರ್ಕಾರ ಸುಪ್ರೀಂಕೋರ್ಟ್ಗೆ ಮೊರೆಹೋಗಲು ತೀರ್ಮಾನಿಸಿದೆ, ಸರ್ವಪಕ್ಷಗಳ ಸಭೆ ನಡೆಸಿ ಮುಂದಿನ ತೀರ್ಮಾನ ಮಾಡಲಿದೆ. ರಾಜ್ಯದ ಜನರ ಹಿತ ಪರಿಗಣಿಸಿ ತೀರ್ಮಾನ ಮಾಡಬೇಕು ಎಂದು ಹೇಳಿದರು.
ತೀರ್ಪಿಯಿಂದ ಕಾವೇರಿ ಕೊಳ್ಳದ ಭಾಗದಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಎದುರಾಗುತ್ತದೆ. ಹೇಮಾವತಿ ನೀರು ಅವಲಂಬಿಸಿರುವ ತುಮಕೂರು ಜಿಲ್ಲೆ ಜನರೂ ನೀರಿನ ಅಭಾವ ಅನುಭವಿಸಬೇಕಾಗುತ್ತದೆ. ಮಳೆ ಬಾರದಿದ್ದರೆ ಹಾಹಾಕಾರ ಪರಿಸ್ಥಿತಿ ಉಂಟಾಗುತ್ತದೆ ಎಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್. ರಾಮಯ್ಯ ಮಾತನಾಡಿ, ನಮ್ಮ ಪಾಲಿನ ನೀರನ್ನು ಉಳಿಸಿಕೊಳ್ಳಲು ರಾಜಕೀಯ ನಾಯಕರು ಯತ್ನ ಮಾಡಬೇಕು. ರಾಜ್ಯದ ಎಲ್ಲಾ ಲೋಕಸಭಾ ಸದಸ್ಯರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕು. ರಾಜ್ಯದ ಪರಿಸ್ಥಿತಿಯನ್ನು ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಿಕೊಡಲು ನ್ಯಾಯಾಧೀಶರನ್ನು ನೇಮಕ ಮಾಡಬೇಕು. ಪ್ರತಿ ಬಾರಿ ನಮ್ಮಲ್ಲಿ ಭಾಷೆ, ನೆಲ, ಜಲದ ವಿಚಾರವಾಗಿ ಅನ್ಯಾಯವಾಗುತ್ತಲೇ ಇರುವುದು ರಾದ್ಧಾಂತವೇ ಎಂದರು.
ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರಾದ ಸೋಮಶೇಖರ್, ಅರುಣ್ ಕೃಷ್ಣಯ್ಯ, ಬೇವಿನಮರದ ಸಿದ್ಧಪ್ಪ, ರೈತ ಸಂಘದ ಬಸವರಾಜು, ಅರುಣ್ ಕುಮಾರ್, ಶಬ್ಬೀರ್ ಅಹಮ್ಮದ್, ಇಂದ್ರಕುಮಾರ್, ಯಲ್ಲೇಶ್ಗೌಡ, ಪ್ರಸನ್ನ ಕುಮಾರ್, ಮೀಸೆ ಸತೀಶ್, ಗಿರೀಶ್, ಲೋಕೇಶ್, ಭೀಮಾನಾಯ್ಕ್, ಉಮೇಶ್ ಕುಮಾರ್, ನಟರಾಜ್, ಬಸವರಾಜು, ಸಂತೋಷ್, ವಿತಾಲ್ಜೈನ್, ಗುರುರಾಘವೇಂದ್ರ, ಜಿಮ್ ನಟರಾಜ್, ವರದರಾಜು, ಸಂತೋಷ್, ಸತೀಶ್, ಇಮ್ರಾನ್ ಅಹಮ್ಮದ್, ಯತೀಶ್ ದಿಬೂರು, ಶ್ರೀನಿವಾಸ್, ಕಿರಣ್, ರಾಮಲಿಂಗರೆಡ್ಡಿ, ಸುಧೀರ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
