ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಹಾಗೂ ಸ್ಥಾನಮಾನ ಸಿಗದೆ ಅಸಮಾಧಾನಗೊಂಡಿರುವ ಕಾಂಗ್ರೆಸ್ ಶಾಸಕರನ್ನು ಶಮನಗೊಳಿಸುವ ಪ್ರಯತ್ನಗಳು ನಡೆಯುತ್ತಿದ್ದು, ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. “ಸಚಿವ ಸ್ಥಾನ ಸಿಗಲಿಲ್ಲವೆಂಬ ಕಾರಣಕ್ಕೆ ಪಕ್ಷ ಅಥವಾ ವರಿಷ್ಠರ ವಿರುದ್ಧ ಮಾತನಾಡುವುದು ಸರಿಯಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬುಧವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷ ಹಾಗೂ ಸರ್ಕಾರದ ನಿರ್ಧಾರಗಳ ಕುರಿತು ಹಲವು ವಿಷಯಗಳನ್ನು ಹಂಚಿಕೊಂಡರು.
ಕಾಂಗ್ರೆಸ್ ನಲ್ಲಿ ಅರ್ಹ ಮತ್ತು ಯುವ ಶಾಸಕರ ಸಂಖ್ಯೆ ಹೆಚ್ಚಾಗಿದೆ. ಆದರೆ ನಿಯಮಗಳ ಪ್ರಕಾರ ಶೇಕಡಾ 15ರಷ್ಟು ಶಾಸಕರಿಗೆ ಮಾತ್ರ ಸಚಿವರಾಗಲು ಅವಕಾಶವಿರುತ್ತದೆ. ಸಾಮಾಜಿಕ ನ್ಯಾಯ, ಅನುಭವ ಮತ್ತು ಪ್ರಾದೇಶಿಕ ಸಮತೋಲನವನ್ನು ಕಾಯ್ದುಕೊಂಡು ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿದೆ.
“ನಮ್ಮಿಂದ ಪಕ್ಷ ಇದೆಯೇ ಹೊರತು, ಪಕ್ಷದಿಂದ ನಾವಿಲ್ಲ” ಎಂಬ ಕೆಲ ಶಾಸಕರ ಹೇಳಿಕೆಗೆ ಟಾಂಗ್ ನೀಡಿದ ಪ್ರಿಯಾಂಕ್ ಖರ್ಗೆ, ಆರಂಭದಲ್ಲಿ ಎಲ್ಲರೂ ಪಕ್ಷದ ಚಿಹ್ನೆ ಮತ್ತು ಬೆಂಬಲಕ್ಕಾಗಿ ಕಚೇರಿಗಳಿಗೆ ಅಲೆದಾಡಿದ್ದನ್ನು ನೆನಪಿಸಿಕೊಂಡರು. “ನಾವು ಎಷ್ಟೇ ಬಾರಿ ಗೆದ್ದಿದ್ದರೂ ಪಕ್ಷದ ವರ್ಚಸ್ಸಿನಿಂದ ನಾವಿದ್ದೇವೆ ಎಂಬುದನ್ನು ಯಾರೂ ಮರೆಯಬಾರದು” ಎಂದರು.
ರಾಜೀನಾಮೆ ನೀಡುವವರ ಕುರಿತು ಪ್ರತಿಕ್ರಿಯಿಸಿ, “ರಾಜೀನಾಮೆ ನೀಡಿದರೆ ಸ್ವೀಕಾರ ಮಾಡಲಾಗುವುದು ಎಂದು ಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಪಕ್ಷವನ್ನು ಕಟ್ಟುವುದು ಮತ್ತು ಉಳಿಸಿಕೊಂಡು ಹೋಗುವುದು ಕಷ್ಟದ ಕೆಲಸ” ಎಂದು ಹೇಳಿದರು.
ವೀರೇಂದ್ರ ಪಾಟೀಲ್ ಅವರ ಕಾಲದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರಂ ಸಿಂಗ್ ಅವರಿಗೆ ಸಚಿವ ಸ್ಥಾನ ಸಿಗದಿದ್ದರೂ ಅವರು ಎಂದಿಗೂ ಪಕ್ಷಕ್ಕೆ ಅನ್ಯಾಯವಾಯಿತು ಎಂದು ಹೇಳಲಿಲ್ಲ. ತಾವೂ ಕೂಡ ಪಕ್ಷ ಹಾಗೂ ಚಿತ್ತಾಪುರ ಕ್ಷೇತ್ರದ ಕಾರ್ಯಕರ್ತರಿಗೆ ಎಂದೆಂದಿಗೂ ಚಿರಋಣಿ ಎಂದು ಖರ್ಗೆ ಹೇಳಿದರು.
ಮಧ್ಯಪ್ರದೇಶ ಹಾಗೂ ಬಿಹಾರದ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿ, ರಾಜಕೀಯದಲ್ಲಿ ಜನರೇ ಅಂತಿಮ ನಿರ್ಣಾಯಕರು. ಎಷ್ಟೇ ಧಿಮಾಕಿನಿಂದ ಇದ್ದರೂ ಜನ ತಕ್ಕ ಪಾಠ ಕಲಿಸುತ್ತಾರೆ ಎಂಬುದು ಬಿಜೆಪಿಗೂ ಎಚ್ಚರಿಕೆಯ ಗಂಟೆಯಾಗಿದೆ ಎಂದರು.
ಪಶುವೈದ್ಯರ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಕೆಪಿಎಸ್ ಸಿ ಅಕ್ರಮ ಪ್ರಕರಣವನ್ನು ಈಗಾಗಲೇ ಸಿಐಡಿ (CID) ತನಿಖೆಗೆ ವಹಿಸಲಾಗಿದೆ. ಅಭ್ಯರ್ಥಿಗಳ ಮನವಿ ಸ್ವೀಕರಿಸಿದ್ದು, ಕಾನೂನಾತ್ಮಕವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
