ವರದಿ: ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ : ಮುಂಗಾರು ಮಳೆಯಿಲ್ಲದೇ ಕರ್ನಾಟಕದ 28 ಜಿಲ್ಲೆಗಳು ಬರಪೀಡಿತ ಪ್ರದೇಶ. ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಪತ್ರಬರೆದು ಕೈಕಟ್ಟಿಕೊಂಡು ಕುಳಿತುಕೊಂಡ್ರೇ ಆಗೋದಿಲ್ಲ. ಚುನಾವಣೆ ಬಂದಾಗ ರಾಜಕೀಯ ಮಾಡೋಣ ಈಗ ತುರ್ತಾಗಿ 10 ಸಾವಿರ ಕೋಟಿ ಬರಗಾಲದ ಹಣ ಬಿಡುಗಡೆ ಮಾಡಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹ ಮಾಡಿದರು.
ಕೊರಟಗೆರೆ ತಾಲೂಕು ಕೋಳಾಲ ಮತ್ತು ಚನ್ನರಾಯನದುರ್ಗ ಹೋಬಳಿಯ 6 ಗ್ರಾಮಗಳ ರೈತರ ಜಮೀನುಗಳಿಗೆ ಮಂಗಳವಾರ ಭೇಟಿ ನೀಡಿ ಮುಸುಕಿನ ಜೋಳ, ರಾಗಿ ಮತ್ತು ಶೇಂಗಾ ಬೆಳೆಗಳ ಬರ ಅಧ್ಯಯನ ನಡೆಸಿದ ನಂತರ ಮಾತನಾಡಿದರು.
ಕಲ್ಪತರು ಜಿಲ್ಲೆಯಲ್ಲಿ ಶೇಂಗಾ ಮತ್ತು ಮುಸುಕಿನ ಜೋಳದ ಬಿತ್ತನೆಯ ಅವಧಿ ಮುಗಿದಿದೆ. ಬಿತ್ತನೆ ಮಾಡಿರುವ ರಾಗಿ ಬೆಳೆ ಮಳೆಯಿಲ್ಲದೇ ನೆಲಕಚ್ಚಿದೆ. ಸಿರಿಧಾನ್ಯ ಬೆಳೆಗಳ ಬಿತ್ತನೆಗೆ ರೈತರ ಆಸಕ್ತಿಯೇ ಇಲ್ಲದೇ ವಿಮೆಯ ಹಣ ಕಟ್ಟೋದಿಕ್ಕೂ ಕಲ್ಪತರು ಜಿಲ್ಲೆಯ ರೈತರ ಬಳಿ ಹಣವಿಲ್ಲ. ರಾಜ್ಯ ಸರಕಾರ ತಕ್ಷಣವೇ ಬರಗಾಲ ಘೋಷಣೆ ಮಾಡಿ ರೈತರ ನೇರವಿಗೆ ದಾವಿಸಬೇಕಿದೆ ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ತುಮಕೂರು ನಗರ ಶಾಸಕ ಜ್ಯೋತಿಗಣೇಶ್, ಗ್ರಾಮಾಂತರ ಶಾಸಕ ಸುರೇಶ್‌ಗೌಡ, ನಿವೃತ್ತ ಐಎಎಸ್ ಅಧಿಕಾರಿ ಅನಿಲ್‌ಕುಮಾರ್, ಮಧುಗಿರಿ ಜಿಲ್ಲಾಧ್ಯಕ್ಷ ಚಿದಾನಂದಗೌಡ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಡಾ.ಕೆ.ಎಲ್. ದರ್ಶನ್, ಬಿಜೆಪಿ ಮಂಡಲ ಅಧ್ಯಕ್ಷ ರುದ್ರೇಶ್, ಜೆಡಿಎಸ್ ಅಧ್ಯಕ್ಷ ಕಾಮರಾಜು, ಉಪಾಧ್ಯಕ್ಷ ಗೋವಿಂದರೆಡ್ಡಿ, ಯುವಧ್ಯಕ್ಷ ದಾಸರಹಳ್ಳಿ ಚೇತನ್, ಮಹಿಳಾಧ್ಯಕ್ಷೆ ಕಾತ್ಯಾಯಿನಿ, ಕಾರ್ಯದರ್ಶಿ ರೂಪಶ್ರೀ ಮುಖಂಡರಾದ ಲಕ್ಷ್ಮೀಶ, ಮಂಜುನಾಥ, ನಟರಾಜು, ಮಹೇಶ್, ನಾಗರಾಜು ಸೇರಿದಂತೆ ಇತರರು ಇದ್ದರು.
ಕೊರಟಗೆರೆಯಲ್ಲಿ ಬರ ಅಧ್ಯಯನ..
ತುಮಕೂರು ಗ್ರಾಮಾಂತರ ತಾಲೂಕಿನ ದುರ್ಗದಹಳ್ಳಿ, ವಡ್ಡರಹಳ್ಳಿ, ಕೊರಟಗೆರೆಯ ಇರಕಸಂದ್ರ ಕಾಲೋನಿ, ತಣ್ಣೇನಹಳ್ಳಿ, ಜೋನಿಗರಹಳ್ಳಿ, ತೋವಿನಕೆರೆಯ ರೈತರ ಜಮೀನಿಗಳಿಗೆ ಭೇಟಿ ನೀಡಿ ರಾಗಿ, ಶೇಂಗಾ, ಮುಸುಕಿನಜೋಳ ಬೆಳೆಗಳ ವಿಕ್ಷಣೆ ಮಾಡಿ ರೈತರ ಜೊತೆ ಬರಗಾಲದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಮಾಲೋಚನೆ ನಡೆಸಿದರು.
ವಿಜಯೇಂದ್ರಗೆ ರೈತರ ಆಗ್ರಹ..
10 ವರ್ಷದ ನಂತರ ಕಲ್ಪತರು ಜಿಲ್ಲೆಗೆ ೮೦ದಿನಗಳ ಮುಂಗಾರು ಮಳೆಯು ಕೈಕೊಟ್ಟಿದೆ. ಉಳುಮೆ ಮಾಡಿದ ಭೂಮಿ ಬರಡಾಗಿ ಬಿತ್ತನೆಬೀಜಗಳು ಮನೆಯಲ್ಲಿ ಶೇಖರಣೆ ಆಗಿವೆ. ಬಿತ್ತನೆ ಮಾಡಿರುವ ಬೆಳೆಗಳು ಮೊಳಕೆಯೇ ಹೊಡೆಯದೇ ನೆಲಕಚ್ಚಿದೆ. ಪ್ರತಿ ಎಕರೇಗೆ 40 ಸಾವಿರ ಪ್ರಸ್ತುತ ನಷ್ಟವಾಗಿ ರೈತರು ಕಂಗಲಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರ ರೈತರ ನೇರವಿಗೆ ಆಗಮಿಸಬೇಕಿದೆ ಎಂದು ಸ್ಥಳೀಯ ರೈತರ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಒತ್ತಾಯ ಮಾಡಿದರು.
ಉಪಾಧ್ಯಕ್ಷ ಮನೆಗೆ ಭೇಟಿ:
ಕೊರಟಗೆರೆ ಬಿಜೆಪಿ ಮಂಡಲ ಉಪಾಧ್ಯಕ್ಷ ಮತ್ತು ಎಲೆರಾಂಪುರ ಗ್ರಾಪಂ ಉಪಾಧ್ಯಕ್ಷ ಉಮೇಶ್‌ಚಂದ್ರ ಇತ್ತಿಚಿಗೆ ಹೃದಯ ಆಘಾತದಿಂದ ಮೃತಪಟ್ಟ ಹಿನ್ನಲೆಯಲ್ಲಿ ಅವರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿನೀಡಿ ಕುಟುಂಬದ ಸದಸ್ಯರಿಗೆ ಸ್ವಾಂತರ ಹೇಳಿದರು.
ನಾನು ಎರಡು ಸಲ ಉಳುಮೆ ಮಾಡಿ 2 ಸಲವು ಬಿತ್ತನೆ ಮಾಡಿದ್ದೇನೆ. ಕನಿಷ್ಟ ಮೊಳಕೆಯು ಹೋಡೆಯದೇ ಪ್ರತಿ ಎಕರೇಗೆ 40 ಸಾವಿರ ನಷ್ಟವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ಬರಗಾಲ ಘೋಷಣೆ ಮಾಡಿ ರೈತರ ನೇರವಿಗೆ ಬರಬೇಕಿದೆ. ಜಾನುವಾರುಗಳಿಗೆ ಮೇವು ಪೂರೈಕೆ ಮಾಡಿ ರೈತರ ಸಾಲ ಮನ್ನಾ ಮಾಡಬೇಕಿದೆ.
— ಗೋವಿಂದರೆಡ್ಡಿ. ರೈತ. ತಣ್ಣೇನಹಳ್ಳಿ.
ಬಿಜೆಪಿ ನೇತೃತ್ವದ 7 ತಂಡ ರಾಜ್ಯದ 30 ಜಿಲ್ಲೆಗಳಲ್ಲಿ ಬರ ಅಧ್ಯಯನ ನಡೆಸುತ್ತಿವೆ. ಕಲ್ಪತರು ಜಿಲ್ಲೆಗೆ ಕಂಡು ಕೇಳರಿಯದ ಭೀಕರ ಬರಗಾಲ ಆವರಿಸಿದೆ. ಬೆಳೆವಿಮೆಯ ಕಂತಿಗೆ ಕಲ್ಪತರು ಜಿಲ್ಲೆಯ ಪ್ರತಿ ಕ್ಷೇತ್ರಕ್ಕೂ ರಾಜ್ಯ ಸರಕಾರವೇ 50 ಲಕ್ಷ ಬಿಡುಗಡೆ ಮಾಡಿ ಕುಡಿಯುವ ನೀರು ಮತ್ತು ಜಾನುವಾರು ಮೇವಿಗೆ ಆಧ್ಯತೆ ನೀಡಬೇಕಿದೆ.
— ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
