ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹ ಜ್ಯೋತಿ’ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ ಗ್ರಾಹಕರಿಗೆ ಇಂಧನ ಇಲಾಖೆ ಎಚ್ಚರಿಕೆಯ ಸಂದೇಶ ನೀಡಿದೆ. ರಾಜ್ಯಾದ್ಯಂತ ನಡೆಯುತ್ತಿರುವ ಮನೆ-ಮನೆ ಸಮೀಕ್ಷೆಯ ವೇಳೆ ಅಗತ್ಯ ದಾಖಲೆಗಳು ಹಾಗೂ ವಿವರಗಳನ್ನು ನೀಡಲು ನಿರಾಕರಿಸಿದರೆ ಅಥವಾ ಲಭ್ಯವಾಗದಿದ್ದರೆ ಫಲಾನುಭವಿಗಳು ಯೋಜನೆಯ ಲಾಭದಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು 1,65,32,652 ಗೃಹ ವಿದ್ಯುತ್ ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಆಗಸ್ಟ್ 2, 2026ರವರೆಗೆ 91,50,081 ಮನೆಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಇನ್ನು 73,82,571 ಫಲಾನುಭವಿಗಳ ಮಾಹಿತಿ ಸಂಗ್ರಹಿಸುವುದು ಬಾಕಿಯಿದೆ. ಯಾವುದೇ ಅರ್ಹ ಗ್ರಾಹಕರು ಯೋಜನೆಯ ಸೌಲ್ಯಭದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಎಲ್ಲಾ ಎಸ್ಕಾಂ ಕಚೇರಿಗಳಲ್ಲಿ ವಿಶೇಷ ಸಮೀಕ್ಷಾ ಶಿಬಿರಗಳನ್ನು ನಡೆಸಲು ಸರ್ಕಾರದ ಅನುಮತಿ ಕೋರಲಾಗಿದೆ.
ಬೆಸ್ಕಾಂ ವ್ಯಾಪ್ತಿಯ ವೈಟ್‌ಫೀಲ್ಡ್, ಮಹದೇವಪುರ ಹಾಗೂ ಸರ್ಜಾಪುರ ಸೇರಿದಂತೆ ಹಲವು ಬೃಹತ್ ಅಪಾರ್ಟ್‌ಮೆಂಟ್‌ಗಳಲ್ಲಿ ಮೀಟರ್ ರೀಡರ್‌ಗಳಿಗೆ ಪ್ರವೇಶ ನೀಡದಿರುವುದು ಮತ್ತು ನಿವಾಸಿಗಳು ವೈಯಕ್ತಿಕ ಮಾಹಿತಿ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಸಮೀಕ್ಷೆ ಕಾರ್ಯಕ್ಕೆ ಅಡಚಣೆಯಾಗಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ ಎನ್. ಅವರು, ಮಾಹಿತಿ ನೀಡಲು ನಿರಾಕರಿಸಿದ ಸಂದರ್ಭದಲ್ಲಿ ಆ್ಯಪ್‌ನಲ್ಲಿ ‘ಮಾಹಿತಿ ನೀಡಲು ನಿರಾಕರಿಸಿದ್ದಾರೆ’ ಎಂದು ನಮೂದಿಸಿ ಸಹಿ ಪಡೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಯಾವುದೇ ಫಲಾನುಭವಿಯನ್ನು ಪಟ್ಟಿಯಿಂದ ಕೈಬಿಟ್ಟಿಲ್ಲ ಮತ್ತು ಯೋಜನೆಯಿಂದ ಯಾರನ್ನಾದರೂ ಹೊರಗಿಡುವ ಬಗ್ಗೆ ಅಂತಿಮ ನಿರ್ಧಾರವನ್ನು ಸರ್ಕಾರವೇ ಕೈಗೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಮೀಕ್ಷೆ ಪೂರ್ಣಗೊಂಡ ಅಂಕಿ-ಅಂಶಗಳನ್ನು ನೋಡುವುದಾದರೆ, ಬೆಸ್ಕಾಂ ವ್ಯಾಪ್ತಿಯಲ್ಲಿ 37,28,114, ಹೆಸ್ಕಾಂ ವ್ಯಾಪ್ತಿಯಲ್ಲಿ 22,03,401, ಮೆಸ್ಕಾಂ ವ್ಯಾಪ್ತಿಯಲ್ಲಿ 12,31,289, ಸಿಇಎಸ್‌ಸಿ ಮೈಸೂರು ವ್ಯಾಪ್ತಿಯಲ್ಲಿ 11,09,782, ಗೆಸ್ಕಾಂ ವ್ಯಾಪ್ತಿಯಲ್ಲಿ 8,50,786 ಹಾಗೂ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ವ್ಯಾಪ್ತಿಯಲ್ಲಿ 26,709 ಮನೆಗಳ ಪರಿಶೀಲನೆ ಪೂರ್ಣಗೊಂಡಿದೆ.
ಮೀಟರ್ ರೀಡರ್‌ಗಳು ಮನೆಗೆ ಭೇಟಿ ನೀಡಿದಾಗ ಫಲಾನುಭವಿಗಳು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಪ್ಯಾನ್ ಕಾರ್ಡ್, ಭಾವಚಿತ್ರ ಹಾಗೂ ಬಾಡಿಗೆದಾರರಾಗಿದ್ದರೆ ಬಾಡಿಗೆ ಒಪ್ಪಂದ ಪತ್ರದಂತಹ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕೆಂದು ಇಲಾಖೆ ವಿನಂತಿಸಿದೆ.
ಆಗಸ್ಟ್ 2023ರಲ್ಲಿ ಆರಂಭವಾದ ಗೃಹಜ್ಯೋತಿ ಯೋಜನೆಗೆ ಮೇ 2026ರವರೆಗೆ ರಾಜ್ಯ ಸರ್ಕಾರ ಒಟ್ಟು ₹26,997.54 ಕೋಟಿ ವೆಚ್ಚ ಮಾಡಿದ್ದು, ಇದರಲ್ಲಿ ಬೆಸ್ಕಾಂ ವ್ಯಾಪ್ತಿಯೊಂದರಲ್ಲೇ ಅತಿ ಹೆಚ್ಚು ಅಂದರೆ ₹12,577.61 ಕೋಟಿ ವೆಚ್ಚವಾಗಿದೆ. ಸೌಲಭ್ಯವು ಅರ್ಹರಿಗೆ ತಲುಪಲು ಗ್ರಾಹಕರು ಈ ಸಮೀಕ್ಷೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಇಂಧನ ಇಲಾಖೆ ಕೋರಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
