ಬೆಂಗಳೂರು: ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಸೃಷ್ಟಿಯಾಗಿರುವ ಅಸಮಾಧಾನ ಹಾಗೂ ಸಚಿವರಿಗೆ ಖಾತೆ ಹಂಚಿಕೆ ವಿಳಂಬದ ಬಿಕ್ಕಟ್ಟು ಶಮನಗೊಳಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಹೈಕಮಾಂಡ್ ಮಧ್ಯಸ್ಥಿಕೆ ಕೋರಿ ನವದೆಹಲಿಗೆ ತೆರಳುವ ಸಾಧ್ಯತೆಯಿದೆ. ಆಗಸ್ಟ್ 13ರಿಂದ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಅದಕ್ಕೂ ಮುನ್ನವೇ ಸಂಪುಟಕ್ಕೆ ಸಂಬಂಧಿಸಿದ ಎಲ್ಲಾ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಕಾಂಗ್ರೆಸ್ ನಾಯಕತ್ವ ನಿರ್ಧರಿಸಿದೆ.
ಆಗಸ್ಟ್ 3ರಂದು ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ 19 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಪ್ರಮಾಣವಚನ ಸ್ವೀಕರಿಸಿ ದಿನಗಳು ಕಳೆದರೂ ಖಾತೆ ಹಂಚಿಕೆ ಆಗದಿರುವುದು ಪಕ್ಷದೊಳಗೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಮುಂಬರುವ ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಈ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದನ್ನು ತಪ್ಪಿಸಲು ಅಧಿವೇಶನಕ್ಕಿಂತ ಮುಂಚಿತವಾಗಿಯೇ ಈ ಗೊಂದಲ ಬಗೆಹರಿಸಲು ಯೋಜಿಸಲಾಗಿದೆ.
ಪ್ರಸ್ತುತ ಹೈಕಮಾಂಡ್ ಮುಂದೆ ಪ್ರಮುಖ ಮೂರು ಸವಾಲುಗಳಿವೆ. ಖಾಲಿ ಇರುವ ಒಂದು ಸಚಿವ ಸ್ಥಾನವನ್ನು ಮಹಿಳಾ ಶಾಸಕರಿಗೆ ನೀಡುವುದು, ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಅವರನ್ನು ಸಮಾಧಾನಪಡಿಸುವುದು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿತ ಬಾದಾಮಿ ಶಾಸಕ ಬಸವರಾಜ ಶಿವಣ್ಣನವರ್ ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸುವುದು ಮುಖ್ಯ ವಿಷಯವಾಗಿದೆ. ಈ ನಡುವೆ ಎಂ. ಕೃಷ್ಣಪ್ಪ ಅವರ ಪುತ್ರ ಹಾಗೂ ಗೋವಿಂದರಾಜನಗರ ಶಾಸಕ ಪ್ರಿಯಾ ಕೃಷ್ಣ ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದಾರೆ ಹಾಗೂ ರಾಹುಲ್ ಗಾಂಧಿ ಭೇಟಿಗೂ ಸಮಯ ಕೋರಿದ್ದಾರೆ.
ಪಕ್ಷದೊಳಗೆ ಉಂಟಾಗಿರುವ ಅಸಮಾಧಾನ ಶಮನಗೊಳಿಸಲು ಹಾಲಿ ಇರುವ ಒಬ್ಬರು ಅಥವಾ ಇಬ್ಬರು ಸಚಿವರನ್ನು ಬದಲಾಯಿಸುವ ಸಾಧ್ಯತೆಗಳ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ನಾಗಮಂಗಲ ಶಾಸಕ ಎನ್. ಚಲುವರಾಯಸ್ವಾಮಿ ಬದಲಿಗೆ ಎಂ. ಕೃಷ್ಣಪ್ಪ ಅವರಿಗೆ ಅವಕಾಶ ನೀಡಬಹುದು ಎನ್ನಲಾಗುತ್ತಿದೆ. ಹಾಗೆಯೇ ಸಿಬಿಐ ಆರೋಪಪಟ್ಟಿ ಎದುರಿಸುತ್ತಿರುವ ಬಿ. ನಾಗೇಂದ್ರ ಅವರ ಜಾಗಕ್ಕೆ ಬಳ್ಳಾರಿ ಸಂಸದ ಇ. ತುಕಾರಾಂ ಅವರ ಪತ್ನಿ, ಸಂಡೂರು ಶಾಸಕಿ ಇ. ಅನ್ನಪೂರ್ಣ ಅವರಿಗೆ ಅವಕಾಶ ನೀಡಿ ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಪ್ರಾತಿನಿಧ್ಯ ಎರಡನ್ನೂ ಸರಿದೂಗಿಸುವ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿದೆ. ಇದಲ್ಲದೆ ರಿಜ್ವಾನ್ ಅರ್ಷದ್ ಬದಲಿಗೆ ಕಣೀಜ್ ಫಾತಿಮಾ ಹೆಸರು ಕೇಳಿಬರುತ್ತಿದ್ದರೂ, ರಿಜ್ವಾನ್ ಅರ್ಷದ್ ಈಗಾಗಲೇ ಪ್ರಭಾವಿ ಖಾತೆಗಾಗಿ ಪ್ರಯತ್ನ ನಡೆಸುತ್ತಿದ್ದಾರೆ.
ಆಗಸ್ಟ್ 13ರ ಅಧಿವೇಶನಕ್ಕೆ ಮುನ್ನ ಹೈಕಮಾಂಡ್ ಮಟ್ಟದಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳಲು ಸಿಎಂ ಡಿ.ಕೆ. ಶಿವಕುಮಾರ್ ದೆಹಲಿ ಭೇಟಿ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತಿತರ ನಾಯಕರ ಜೊತೆಗಿನ ಚರ್ಚೆ ತೀವ್ರ ಕುತೂಹಲ ಮೂಡಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
