ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಇಬ್ಬರು ಯುವಕರನ್ನು “ನೀವು ಭಯೋತ್ಪಾದಕರಾ?” ಎಂದು ಪ್ರಚೋದನಾತ್ಮಕವಾಗಿ ಪ್ರಶ್ನಿಸಿ, ಬೇಸ್‌ಬಾಲ್ ಬ್ಯಾಟ್ ನಿಂದ ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಆಗಸ್ಟ್ 6ರಂದು ಮುಂಜಾನೆ ಸುಮಾರು 4:30ರ ವೇಳೆಗೆ ಎಚ್‌ಎಎಲ್ (HAL) ಪೊಲೀಸ್ ಠಾಣೆ ವ್ಯಾಪ್ತಿಯ ಎಇಸಿಎಸ್ (AECS) ಲೇಔಟ್‌ನಲ್ಲಿರುವ ‘ಪೋಲಾರ್ ಬಿಯರ್’ ಐಸ್‌ಕ್ರೀಮ್ ಅಂಗಡಿಯ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ಯುವಕರನ್ನು ಸಂದೀಪ್ ಕುಮಾರ್ (27) ಹಾಗೂ ರೋಹಿತ್ ಕುಮಾರ್ (26) ಎಂದು ಗುರುತಿಸಲಾಗಿದೆ. ಇವರಿಬ್ಬರೂ ತಮ್ಮ ಸ್ನೇಹಿತನಿಗಾಗಿ ಅಲ್ಲಿ ಕಾಯುತ್ತಿದ್ದರು.
ಈ ಸಮಯದಲ್ಲಿ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ (ಮದ್ಯದ ಅಮಲಿನಲ್ಲಿರುವಂತೆ ಕಂಡುಬಂದಿದ್ದ) ಯುವಕರ ಬಳಿ ಬಂದು ಪ್ರಚೋದನಾತ್ಮಕವಾಗಿ “ನೀವು ಭಯೋತ್ಪಾದಕರಾ?” ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ರೋಹಿತ್ ಕುಮಾರ್ “ಇಲ್ಲ, ನಾವು ಭಾರತೀಯ ನಾಗರಿಕರು” ಎಂದು ಉತ್ತರಿಸಿದ್ದಾರೆ.
ಬಳಿಕ ಆ ವ್ಯಕ್ತಿ ಐಡಿ ಕಾರ್ಡ್ ತೋರಿಸುವಂತೆ ಬೆದರಿಕೆ ಹಾಕಿದ್ದಾನೆ. “ಯಾವ ಅಧಿಕಾರದ ಮೇರೆಗೆ ಐಡಿ ಕಾರ್ಡ್ ಕೇಳುತ್ತಿದ್ದೀರಾ?” ಎಂದು ಯುವಕರು ಮರುಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡ ಆರೋಪಿ, ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾನೆ. ತಕ್ಷಣ ತನ್ನ ಕಾರಿನಲ್ಲಿದ್ದ ಬೇಸ್‌ಬಾಲ್ ಬ್ಯಾಟ್ ತೆಗೆದುಕೊಂಡು ಸಂದೀಪ್ ಕುಮಾರ್ ಅವರ ತೊಡೆಯ ಭಾಗಕ್ಕೆ ಹೊಡೆದಿದ್ದಾನೆ.
ಘಟನೆಯನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಲು ಯತ್ನಿಸಿದ ರೋಹಿತ್ ಕುಮಾರ್ ಅವರ ಕೈಗೂ ಬ್ಯಾಟ್‌ನಿಂದ ಬಲವಾಗಿ ಹೊಡೆದು, ಕೆನ್ನೆಗೆ ಹಲ್ಲೆ ನಡೆಸಿದ್ದಾನೆ.
ಸಂದೀಪ್ ಕುಮಾರ್ ನೀಡಿರುವ ದೂರಿನನ್ವಯ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ದೃಶ್ಯಗಳು ಸಮೀಪದ ಬ್ಯಾಂಕ್ ಸಿಸಿಟಿವಿ ಹಾಗೂ ಯುವಕರ ಮೊಬೈಲ್ ಫೋನ್‌ನಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಯ ಪತ್ತೆಗೆ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
