ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸದ ವೆಚ್ಚ 2021 ರಿಂದ ಐದು ಪಟ್ಟು ಹೆಚ್ಚಾಗಿದೆ. ರಾಜ್ಯಸಭೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ, 2021 ರಲ್ಲಿ 36 ಕೋಟಿ ರೂಪಾಯಿಗಿಂತ ಅಧಿಕವಿದ್ದ ವಾರ್ಷಿಕ ವೆಚ್ಚವು 2025 ರಲ್ಲಿ 180 ಕೋಟಿ ರೂಪಾಯಿಗಿಂತ ಹೆಚ್ಚಾಗಿದೆ.
ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪವಿತ್ರ ಮಾರ್ಗರಿಟಾ ಅವರು ಲಿಖಿತ ಉತ್ತರದಲ್ಲಿ, 2021 ರಿಂದೀಚೆಗೆ ಪ್ರಧಾನಿಯವರ ವಿದೇಶಿ ಪ್ರವಾಸಗಳಿಗೆ ಒಟ್ಟಾರೆಯಾಗಿ 550 ಕೋಟಿ ರೂಪಾಯಿಗೂ ಅಧಿಕ ವೆಚ್ಚವಾಗಿದೆ ಎಂದು ತಿಳಿಸಿದ್ದಾರೆ.
2026 ನೇ ಸಾಲಿನಲ್ಲಿ ಇಲ್ಲಿಯವರೆಗೆ 74.58 ಕೋಟಿ ರೂಪಾಯಿಗಿಂತ ಹೆಚ್ಚು ವೆಚ್ಚವಾಗಿದೆ. ಇದರಲ್ಲಿ ಮೇ ತಿಂಗಳಲ್ಲಿ ನಡೆದ ನಾರ್ವೆ ಪ್ರವಾಸವು 17.46 ಕೋಟಿ ರೂಪಾಯಿಯೊಂದಿಗೆ ಗರಿಷ್ಠ ವೆಚ್ಚದ ಪ್ರವಾಸವಾಗಿದೆ. ಕೆಲವು ಅಂಕಿಅಂಶಗಳು ತಾತ್ಕಾಲಿಕವಾಗಿದ್ದು, ಜೂನ್ ನಲ್ಲಿ ನಡೆದ ಫ್ರಾನ್ಸ್ ಪ್ರವಾಸದ ಅಂತಿಮ ವೆಚ್ಚ ಇನ್ನೂ ನಿರ್ಧಾರವಾಗಬೇಕಿದೆ.
ಈ ವೆಚ್ಚವನ್ನು ಸಮರ್ಥಿಸಿಕೊಂಡಿರುವ ಸಚಿವಾಲಯವು, ಜುಲೈ 2021 ರಿಂದ ನಡೆದ ಪ್ರವಾಸಗಳ ಸಂದರ್ಭದಲ್ಲಿ ರಕ್ಷಣೆ, ಡಿಜಿಟಲ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್ಗಳು, ನವೀಕರಿಸಬಹುದಾದ ಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 316 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ತಿಳಿಸಿದೆ.
ಅಲ್ಲದೆ, ಏಪ್ರಿಲ್ 2021 ರಿಂದ ಡಿಸೆಂಬರ್ 2025 ರ ಅವಧಿಯಲ್ಲಿ ಭಾರತಕ್ಕೆ 381.8 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆ (ಎಫ್ಡಿಐ) ಹರಿದುಬಂದಿದೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
