ತುಮಕೂರು: ದೇಶಾದ್ಯಂತ ಶಿಕ್ಷಣದ ಖಾಸಗೀಕರಣ, ಆರೋಗ್ಯ ಕ್ಷೇತ್ರ ವ್ಯಾಪಾರೀಕರಣಗೊಳ್ಳುತ್ತಿರುವುದು, ದಿನೇ ದಿನೇ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಹಾಗೂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಿದ ಎಐಡಿಎಸ್ಓ (AIDSO) ವಿದ್ಯಾರ್ಥಿ ಸಂಘಟನೆ, 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕ್ರಾಂತಿಕಾರಿಗಳ ಕನಸಿನ ಭಾರತ ನಿರ್ಮಾಣಕ್ಕಾಗಿ ಪ್ರತಿಜ್ಞಾ ದಿನ ಆಚರಿಸಿದೆ.
ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮರು ಕಂಡಿದ್ದ ಸಮಾನತೆಯ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆಯ ಮೇಲಿರುವ ಜವಾಬ್ದಾರಿಯನ್ನು ನೆನಪಿಸುವ ಸಲುವಾಗಿ ಎಐಡಿಎಸ್ಓ (AIDSO) ತುಮಕೂರು ಜಿಲ್ಲಾ ಸಮಿತಿಯು ಜಿಲ್ಲೆಯ ವಿವಿಧ ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆ ಪ್ರತಿಜ್ಞಾ ವಿಧಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಈ ವೇಳೆ ಮಾತನಾಡಿದ ಮುಖಂಡರು, ಪ್ರಾಣತ್ಯಾಗ ಮಾಡಿದ ಕ್ರಾಂತಿಕಾರಿ ಹೋರಾಟಗಾರರಿಗೆ ಗೌರವ ಸಲ್ಲಿಸುತ್ತಾ, ನೇತಾಜಿ ಸುಭಾಷ್ ಚಂದ್ರ ಬೋಸ್ ಹಾಗೂ ಭಗತ್ ಸಿಂಗ್ರಂತಹ ಮಹಾನ್ ನಾಯಕರು ಕನಸು ಕಂಡ ಸಮಾಜವಾದಿ ಭಾರತವನ್ನು ನಿರ್ಮಿಸುವ ಅಗತ್ಯತೆಯನ್ನು ಪ್ರತಿಪಾದಿಸಿದರು.
“ಈಶ್ವರಚಂದ್ರ ವಿದ್ಯಾಸಾಗರರ ವೈಜ್ಞಾನಿಕ ಮನೋಧರ್ಮ, ಖುದೀರಾಮ್ ಬೋಸ್ ಅವರ ಕೆಚ್ಚೆದೆ, ಶರತ್ ಚಂದ್ರರ ಸಾಹಿತ್ಯಕ ಮೌಲ್ಯಗಳು, ಸ್ವಾಮಿ ವಿವೇಕಾನಂದರ ಉದಾತ್ತ ದೇಶಪ್ರೇಮ ಹಾಗೂ ನೇತಾಜಿಯವರ ಧರ್ಮನಿರಪೇಕ್ಷತೆಯನ್ನು ಮೈಗೂಡಿಸಿಕೊಳ್ಳುತ್ತೇವೆ. ಭಗತ್ ಸಿಂಗ್ ಕಂಡ ಕನಸಿನಂತೆ – ಯಾವ ಮಗುವೂ ಹಸಿವಿನಿಂದ ನರಳದ, ಯಾವ ಹೆಣ್ಣೂ ಅಭದ್ರತೆಯಿಂದ ರೋಧಿಸದ, ಪ್ರತಿಯೊಬ್ಬರಿಗೂ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ದೊರೆಯುವ ಸಮಸಮಾಜವನ್ನು ನಿರ್ಮಿಸಲು ಸಂಕಲ್ಪ ತೊಡುತ್ತೇವೆ” ಎಂದು ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದರು.
ಈ ಕಾರ್ಯಕ್ರಮದಲ್ಲಿ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ, ಪದಾಧಿಕಾರಿಗಳಾದ ಭರತ್, ಸೈಯದ್, ಯಶವಂತ್, ಹುಸೇನಪ್ಪ, ನಿಸರ್ಗ, ಮಹೇಶ್, ಸಿದ್ದು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಹುತಾತ್ಮರ ಕನಸನ್ನು ನನಸು ಮಾಡುವತ್ತ ಪಣ ತೊಟ್ಟರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
