ಬೀದರ: ನಗರದ ನೆಹರು ಕ್ರೀಡಾಂಗಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಜಿಲ್ಲೆಯನ್ನು ಉದ್ದೇಶಿಸಿ ಮಾತನಾಡಿದರು.
ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಹಾಗೂ ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸಿ ಗೌರವ ನಮನ ಸಲ್ಲಿಸಿದ ಸಚಿವರು, ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಜನರ ಸುಗಮ ಜೀವನವೇ ತಮ್ಮ ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ಹೇಳಿದರು. ಬೀದರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೈಗೊಂಡಿರುವ ಪ್ರಮುಖ ಯೋಜನೆಗಳ ವಿವರಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು.
₹750 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಆಧುನಿಕ ಅನುಭವ ಮಂಟಪದ ಶೇಕಡಾ 80ರಷ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ₹762 ಕೋಟಿ ವೆಚ್ಚದ ಮೆಹಕರ್ ಏತ ನೀರಾವರಿ ಯೋಜನೆಯಿಂದ 12 ಗ್ರಾಮಗಳ 8,475 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದ್ದು, ಕಾರಂಜಾ ಬಲದಂಡೆ ಕಾಲುವೆ ಆಧುನೀಕರಣಕ್ಕಾಗಿ ₹180 ಕೋಟಿ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕಲ್ಯಾಣ ಪಥ ಹಾಗೂ ಪ್ರಗತಿ ಪಥ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಬೀದರ ನಗರದ ಅಭಿವೃದ್ಧಿಗಾಗಿ MGNVY 2.0 ಅಡಿಯಲ್ಲಿ ₹200 ಕೋಟಿ ಅನುದಾನ ಮೀಸಲಿಡಲಾಗಿದೆ.
ಕೃಷಿ, ನೀರಾವರಿ ಮತ್ತು ರೈತರ ಕಲ್ಯಾಣಕ್ಕೆ ವಿಶೇಷ ಗಮನ ನೀಡಲಾಗುತ್ತಿದ್ದು, ಶಿಕ್ಷಣ, ಮೂಲಸೌಕರ್ಯ ಹಾಗೂ ಯುವಜನರ ಉದ್ಯೋಗಾವಕಾಶಗಳ ವಿಸ್ತರಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಜತೆಗೆ ಆರೋಗ್ಯ ಸೇವೆಗಳನ್ನು ಬಲಪಡಿಸಿ ಜನರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸುವುದು ಹಾಗೂ ಮಹಿಳೆಯರು, ಮಕ್ಕಳು ಮತ್ತು ದುರ್ಬಲ ವರ್ಗಗಳ ಸಬಲೀಕರಣಕ್ಕೆ ಜನಪರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಶುಭ ಸಂದರ್ಭದಲ್ಲಿ ಬೀದರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲೀಗೆ, ಬೀದರ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
