ಸರಗೂರು: ಪಟ್ಟಣದ 9ನೇ ವಾರ್ಡಿನ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಕ್ಕಿದ್ದು, ಶಾಸಕ ಅನಿಲ್ ಚಿಕ್ಕಮಾದು ಅವರ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಡಿ ₹35 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಬುಧವಾರ ಚಾಲನೆ ನೀಡಲಾಗಿದೆ.
ಕಾಮಗಾರಿ ಆರಂಭಗೊಂಡ ಬೆನ್ನಲ್ಲೇ ಪಟ್ಟಣ ಪಂಚಾಯಿತಿ ಸದಸ್ಯ ಶ್ರೀನಿವಾಸ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು. ರಸ್ತೆ ನಿರ್ಮಾಣಕ್ಕೆ ಬಳಸಲಾಗುತ್ತಿರುವ ಸಿಮೆಂಟ್, ಜಲ್ಲಿ ಸೇರಿದಂತೆ ಸಾಮಗ್ರಿಗಳ ಗುಣಮಟ್ಟ, ಕಾಮಗಾರಿಯ ತಾಂತ್ರಿಕ ವಿಧಾನ ಹಾಗೂ ರಸ್ತೆಯ ಅಳತೆಯನ್ನು ಹತ್ತಿರದಿಂದ ವೀಕ್ಷಿಸಿದ ಅವರು, ನಿಯಮಗಳ ಪ್ರಕಾರವೇ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಬೇಕೆಂದು ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ವೇಳೆ ಮಾತನಾಡಿದ ಪಪಂ ಸದಸ್ಯ ಶ್ರೀನಿವಾಸ, “9ನೇ ವಾರ್ಡಿನಲ್ಲಿ ರಸ್ತೆ ತೀವ್ರವಾಗಿ ಹದಗೆಟ್ಟಿದ್ದರಿಂದ ಸಾರ್ವಜನಿಕರು ಹಾಗೂ ಸವಾರರು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದರು. ಅದರಲ್ಲೂ ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಂತು ಸಂಚಾರ ಕಷ್ಟಕರವಾಗುತ್ತಿತ್ತು. ಇದೀಗ ನೂತನ ಸಿಸಿ ರಸ್ತೆ ನಿರ್ಮಾಣದಿಂದ ವಾರ್ಡಿನ ನಿವಾಸಿಗಳ ಸುಗಮ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ” ಎಂದರು.
“ನಮ್ಮ ವಾರ್ಡಿನ ಅಭಿವೃದ್ಧಿಗೆ ಶಾಸಕ ಅನಿಲ್ ಚಿಕ್ಕಮಾದು ಅವರು ವಿಶೇಷ ಆದ್ಯತೆ ನೀಡಿದ್ದು, ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿ ತಕ್ಷಣ ಅನುದಾನ ಬಿಡುಗಡೆ ಮಾಡಿರುವುದು ಶ್ಲಾಘನೀಯ. ಇದೇ ರೀತಿ ಪಟ್ಟಣದ ಇತರ ವಾರ್ಡುಗಳಲ್ಲೂ ಅಗತ್ಯವಿರುವ ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಒದಗಿಸಿ ಅಭಿವೃದ್ಧಿಗೆ ಸಹಕರಿಸಬೇಕು” ಎಂದು ಅವರು ಶಾಸಕರಲ್ಲಿ ಮನವಿ ಮಾಡಿಕೊಂಡರು.
ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಸ್ಥಳೀಯ ನಿವಾಸಿಗಳು, ವಿದ್ಯಾರ್ಥಿಗಳು ಹಾಗೂ ವಾಹನ ಸವಾರರ ಅಲೆದಾಟ ತಪ್ಪಲಿದ್ದು, ಕಾಮಗಾರಿ ದೀರ್ಘಕಾಲ ಬಾಳಿಕೆ ಬರುವಂತೆ ಗುಣಮಟ್ಟ ಕಾಯ್ದುಕೊಳ್ಳುವುದು ಅಗತ್ಯ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖ ಮುಖಂಡರು, ವಾರ್ಡಿನ ನಿವಾಸಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
