ತುಮಕೂರು: ನಗರಕ್ಕೆ ನೀರು ಪೂರೈಸುವ ಬುಗುಡನಹಳ್ಳಿ ಜಲಸಂಗ್ರಹಾಗಾರಕ್ಕೆ ಹೇಮಾವತಿ ನದಿ ನೀರು ಎರಡು ದಿನಗಳ ಹಿಂದಿನಿಂದ ಹರಿಯಲಾರಂಭಿಸಿದ್ದು ಶನಿವಾರ ಸಂಜೆ ಡಿಸಿಎಂ ಡಾ.ಜಿ.ಪರಮೇಶ್ವರ್ ಭೇಟಿ ನೀಡಿ ಪರಿಶೀಲಿಸಿದರು.
ಆ.18 ರಿಂದ ಬುಗುಡನಹಳ್ಳಿ ಜಲ ಸಂಗ್ರಹಾಗಾರಕ್ಕೆ ನೀರು ಹರಿಯುತ್ತಿದ್ದು, ಜಲ ಸಂಗ್ರಹಾಗಾರದಲ್ಲಿ 150 ಎಂಸಿಎಫ್ ಟಿ ಮಾತ್ರ ನೀರು ಉಳಿದು ಡೆಡ್‌ಸ್ಟೋರೇಜ್ ತಲುಪಿತ್ತು. ಸದ್ಯ 72 ಎಂಸಿಎಫ್ ಟಿ ನೀರು ಹರಿದು ಹಾಲಿ ಸಂಗ್ರಹಾಗಾರದಲ್ಲಿ ನೀರಿನ ಮಟ್ಟ 222 ಎಂಸಿಎಫ್ ಟಿಗೆ ಏರಿಕೆಯಾಗಿದೆ. ಸಂಗ್ರಹಾಗಾರ ಪೂರ್ಣ ತುಂಬಲು 360 ಎಂಸಿಎಫ್ ಟಿ ನೀರು ಅವಶ್ಯಕತೆಯಿದ್ದು, ನಿರಂತರವಾಗಿ ನೀರು ಹರಿದರೆ ಇನ್ನೆರಡು ಮೂರು ದಿನಗಳಲ್ಲಿ ಸಂಗ್ರಹಾಗಾರ ತುಂಬಲಿದೆ ಪಾಲಿಕೆ ಆಯುಕ್ತೆ ಶುಭ ಹಾಗೂ ಇಇ ಸಂದೀಪ್ ಸಚಿವರಿಗೆ ಮಾಹಿತಿ ನೀಡಿದರು.
ಈ ಬಾರಿ ಬರಗಾಲದ ಪರಿಸ್ಥಿತಿ ಇರುವುದರಿಂದ ಬುಗುಡನಹಳ್ಳಿ ಕೆರೆಗೆ ಹರಿದುಬರುವ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಬಳಸಬೇಕು. ಯಾವುದೇ ಕಾರಣಕ್ಕೂ ಕೃಷಿ ಚಟುವಟಿಕೆಗಳಿಗೆ ಬಳಸಬಾರದೆಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಮನವಿ ಮಾಡಿದರು.
ತುಮಕೂರು ನಗರಕ್ಕೆ ಹೇಮೆ ಪೂರೈಸುವ ಬುಗುಡನಹಳ್ಳಿ ಜಲಸಂಗ್ರಹಾಗಾರಕ್ಕೆ ಶನಿವಾರ ಭೇಟಿಕೊಟ್ಟು ಹೇಮೆ ನೀರು ಹರಿಯುತ್ತಿರುವ ಮಾಹಿತಿ ಕಲೆಹಾಕಿದ ಡಿಸಿಎಂ ಡಾ.ಜಿ.ಪರಮೇಶ್ವರ್, ಡಿಸಿ, ಎಸ್ಪಿ, ಪಾಲಿಕೆ ಆಯುಕ್ತರು, ಗ್ಯಾರಂಟಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಇತರರಿದ್ದರು.
ಈ ವೇಳೆ ಮಾತನಾಡಿದ ಡಾ.ಜಿ.ಪರಮೇಶ್ವರ್ ಅವರು, ಬುಗುಡನಹಳ್ಳಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿತ್ತು. ಹೇಮಾವತಿ ಜಲಾಶಯದಲ್ಲಿ ನೀರು ಲಭ್ಯವಿರುವ ಹಿನ್ನೆಲೆಯಲ್ಲಿ ತುಮಕೂರು ನಗರಕ್ಕೆ ಮುಂದಿನ ಮೂರೂವರೆ ತಿಂಗಳವರೆಗೆ ಕುಡಿಯುವ ನೀರಿನ ಅಗತ್ಯವಿದೆ ಎಂದು ಮನವಿ ಮಾಡಿದ್ದರಿಂದ ಐಸಿಸಿ ಸಲಹಾ ಸಮಿತಿಯವರು ನೀರು ಬಿಡುಗಡೆ ಮಾಡಿದ್ದಾರೆ. ಮತ್ತೆ ಡಿಸೆಂಬರ್ ವೇಳೆಗೆ ನೀರು ಅಗತ್ಯವಿದ್ದು, ಕೆರೆಯನ್ನು ತುಂಬಿಸಿಕೊಂಡರೆ 2027 ಮೇ ಜೂನ್‌ವರೆಗೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಹೇಮಾವತಿ ನೀರು ಬಂದಿರುವುದು ಸಂತಸದ ಸಂಗತಿ ಎಂದರು.
ಆ.27ರವರೆಗೆ ನೀರು ಹರಿಯುವ ನಿರೀಕ್ಷೆಯಿದ್ದು, ಜಲಸಂಗ್ರಹಾಗಾರ ತುಂಬಿದ ಮೇಲೆ ಅಮಾನಿಕೆರೆಗೂ ನೀರು ಪೂರೈಸುವಂತೆ ಡಿಸಿಎಂ ಇದೇ ವೇಳೆ ಅಧಿಕಾರಿಗಳಿಗೆ ಸೂಚಿಸಿದರು. ಡಿಸಿ.ಶುಭ ಕಲ್ಯಾಣ್, ಎಸ್ಪಿ ಕೆ.ವಿ.ಅಶೋಕ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರಗೌಡ, ಹೇಮಾವತಿ ನಾಲಾ ವಲಯದ ಅಧಿಕಾರಿಗಳಿದ್ದರು. ಬರದ ಸ್ಥಿತಿ ಹಿನ್ನೆಲೆಯಲ್ಲಿ ತುಮಕೂರು ನಗರಕ್ಕೆ ಸಕಾಲದಲ್ಲಿ ಹೇಮೆ ಹರಿದಿರುವುದು ಮುಂದಿನ ಮೂರ್ನಾಲ್ಕು ತಿಂಗಳವರೆಗೆ ನೀರಿನ ಸಮಸ್ಯೆ ತಲೆದೂರದ ಸ್ಥಿತಿಯಿಂದ ಪಾರಾದಂತಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
