ಹೊಳೆನರಸೀಪುರ / ಹಳ್ಳಿಮೈಸೂರು: ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರು ಪಂಚಾಯತಿ ಆವರಣದಲ್ಲಿ ಇತ್ತೀಚೆಗೆ ಹಾಸನ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೇಯಸ್ ಪಟೇಲ್ ಅಧ್ಯಕ್ಷತೆಯಲ್ಲಿ ನಡೆದ ‘ಜನಸ್ಪಂದನ’ ಸಭೆಯು ಕೇವಲ ಕಾಗದದ ಮೇಲಿನಾಚೆಗೆ ಸಾರ್ವಜನಿಕರಿಗೆ ಯಾವುದೇ ಸ್ಪಷ್ಟ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಭೆಯಲ್ಲಿ ಸಂಸದರ ಸಮ್ಮುಖದಲ್ಲೇ ಅಧಿಕಾರಿಗಳು ನೀಡಿದ ಭರವಸೆಗಳು ಕೇವಲ ನೀರ ಮೇಲಿನ ಗುಳ್ಳೆಯಾಗಿ ಮಾರ್ಪಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೊಳೆನರಸೀಪುರದ ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರ ಸಂಘದ ‘ಇ ಸ್ವತ್ತು’ ದಾಖಲೆಗೆ ಸಂಬಂಧಿಸಿದಂತೆ ಸಂಘದ ಕಾರ್ಯದರ್ಶಿ ಅಕ್ಷಯ್ ಕುಮಾರ್ ಅವರು ಕಳೆದ 6 ತಿಂಗಳುಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದರೂ, ಹಳ್ಳಿಮೈಸೂರು ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ಯಾವುದೇ ಹಿಂಬರಹ ನೀಡಿರಲಿಲ್ಲ.
ಜನಸ್ಪಂದನ ಸಭೆಯಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ, ಪಿಡಿಒ ಅವರು “ಇದು ಖಾದಿ ಸಂಸ್ಥೆಯ ಜಾಗವೇ ಅಲ್ಲ” ಎಂದು ವಾದಿಸಿ, ತಾವೇ ಈಗಾಗಲೇ ಹಿಂಬರಹ ನೀಡಿರುವುದಾಗಿ ಸಭೆಯನ್ನು ದಾರಿ ತಪ್ಪಿಸುವ ಯತ್ನ ಮಾಡಿದರು. ಆದರೆ ಅಂತಹ ಯಾವುದೇ ಅಧಿಕೃತ ದಾಖಲೆ ಖಾದಿ ಸಂಸ್ಥೆಗೆ ತಲುಪಿರಲಿಲ್ಲ.
ಸಂಸದರ ನಿರ್ದೇಶನದಂತೆ ಕಾರ್ಯದರ್ಶಿ ಅಕ್ಷಯ್ ಕುಮಾರ್ ಹಾಗೂ ಮಾಹಿತಿ ಹಕ್ಕು ಹೋರಾಟಗಾರ ಮುತ್ತುರಾಜ್ ಅವರು ಮರುದಿನ ಬೆಳಗ್ಗೆ 11:00 ಗಂಟೆಗೆ ತಾಲೂಕು ಪಂಚಾಯತಿ ಕಚೇರಿಗೆ ತೆರಳಿ ಕಾರ್ಯನಿರ್ವಾಹಕ ಅಧಿಕಾರಿಯನ್ನು (EO) ಭೇಟಿ ಮಾಡಿದರು.
ಇಒ ಅವರು ಸಂಜೆ 3:10 ರವರೆಗೆ ಸಾರ್ವಜನಿಕರನ್ನು ಕಾಯಿಸಿ, ಕೊನೆಗೆ ಕೇವಲ ತಾಂತ್ರಿಕ ದೋಷದ ಕಾರಣವೊಡ್ಡಿ ಪಿಡಿಒ ಅವರ ಹಳೆಯ ಹಿಂಬರಹದ ಪ್ರತಿಯನ್ನೇ ನೀಡಿದರು.
ಈ ಕುರಿತು ನ್ಯಾಯಾಲಯದಲ್ಲಿ ವಾದ ಮಂಡಿಸುವ ಬಗ್ಗೆ ಅಥವಾ ಹೊಸ ಅರ್ಜಿ ಸಲ್ಲಿಸುವ ಬಗ್ಗೆ ಪ್ರಶ್ನಿಸಿದ ಇಒ, ಏಕವಚನದಲ್ಲಿ ಸಂಸದರ ಹೆಸರನ್ನೆತ್ತಿ ವ್ಯಂಗ್ಯವಾಡಿ, “ನಾನು ನಿನಗೆ ಪಿಎ ಅಲ್ಲ, ಸಂಸದರ ಮುಂದೆ ತುಂಬಾ ಮಾತನಾಡುತ್ತಿದ್ದೆಯಲ್ಲ, ಅದಕ್ಕೆ ನಿನಗೆ ಈ ಸ್ಥಿತಿ ಬಂದಿದೆ” ಎಂದು ಮಾನಸಿಕವಾಗಿ ನಿಂದಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಂಸದರ ಆದೇಶಕ್ಕೂ ಬೆಲೆಯಿಲ್ಲವೇ?
ಕ್ಷೇತ್ರದ ಸಂಸದರಾದ ಶ್ರೇಯಸ್ ಪಟೇಲ್ ಅವರಂತಹ ಜನಪ್ರತಿನಿಧಿಗಳು ಸಾರ್ವಜನಿಕರ ಕುಂದುಕೊರತೆ ನಿವಾರಿಸಲು ನಡೆಸುವ ಅಧಿಕೃತ ಸಭೆಗಳಿಗೇ ಕೆಳಹಂತದ ಅಧಿಕಾರಿಗಳು ಈ ಮಟ್ಟದ ಕ್ಯಾರೆ ಎನ್ನದಿರುವುದು ವ್ಯವಸ್ಥೆಯ ದೋಷಕ್ಕೆ ಹಿಡಿದ ಕನ್ನಡಿಯಾಗಿದೆ. ಸಂಸದರ ಎದುರು ಒಂದು ಮಾತು, ಮರುದಿನ ಸಾರ್ವಜನಿಕರಿಗೆ ಕಿರುಕುಳ ನೀಡುವ ಇಒ ಹಾಗೂ ಪಿಡಿಒ ಅವರ ಬೇಜವಾಬ್ದಾರಿ ಧೋರಣೆಯ ವಿರುದ್ಧ ಉನ್ನತಾಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಕಾರ್ಯದರ್ಶಿ ಹಾಗೂ ಸಾರ್ವಜನಿಕರು ತೀವ್ರವಾಗಿ ಆಗ್ರಹಿಸಿದ್ದಾರೆ.
ವರದಿ: ಮಂಜುಶ್ರವಣೂರು, ಹೊಳೆನರಸೀಪುರ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
