ಬೀದರ್: ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದು, ಗ್ರಾಮದಲ್ಲೇ ಲಭ್ಯವಿರುವ ಉದ್ಯೋಗಾವಕಾಶಗಳನ್ನು ಸದುಪಯೋಗಪಡಿಸಿಕೊಂಡು ಪ್ರತಿಯೊಬ್ಬರೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲರಾವ್ ತಿಳಿಸಿದರು. ತಾಲೂಕಿನ ಜಂಬಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಬಿ–ಜಿ ರಾಮ್ಜಿ ಯೋಜನೆಯಡಿ ನಡೆಯುತ್ತಿರುವ ಸಿಸಿಟಿ ಕಾಮಗಾರಿಯನ್ನು ಗುರುವಾರ ಪರಿಶೀಲಿಸಿ ಅವರು ಮಾತನಾಡಿದರು.
ಗ್ರಾಮೀಣ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾರೂ ವಲಸೆ ಹೋಗಬೇಡಿ, ನಿಮ್ಮೂರಲ್ಲೇ ಕೆಲಸ ಮಾಡಿ. ವಿಬಿ–ಜಿ ರಾಮ್ಜಿ ಯೋಜನೆಯಡಿ ವಾರ್ಷಿಕ ಉದ್ಯೋಗದ ದಿನಗಳನ್ನು 100ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ಪ್ರಸ್ತುತ ದಿನಕ್ಕೆ ರೂ. 382 ಕೂಲಿ ನೀಡಲಾಗುತ್ತಿದ್ದು, 125 ದಿನಗಳ ಉದ್ಯೋಗ ಪಡೆದ ಕುಟುಂಬವು ಗರಿಷ್ಠ ರೂ. 47,750 ವರೆಗೆ ಕೂಲಿ ಪಡೆಯಬಹುದಾಗಿದೆ ಎಂದು ವಿವರಿಸಿದರು.
ಇದೇ ವೇಳೆ ಕಂದಗೂಳ ಗ್ರಾಮಕ್ಕೆ ಭೇಟಿ ನೀಡಿದ ಸಿಇಒ, ಜಲ ಜೀವನ್ ಮಿಷನ್ ಕಾಮಗಾರಿಯನ್ನು ಪರಿಶೀಲಿಸಿದರು. ಗ್ರಾಮಸ್ಥರಿಗೆ ಸಮರ್ಪಕ ಹಾಗೂ ಶುದ್ಧ ಕುಡಿಯುವ ನೀರು ದೊರೆಯುವಂತೆ ಕಾಮಗಾರಿಗಳನ್ನು ಅತ್ಯುತ್ತಮ ಗುಣಮಟ್ಟದಿಂದ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಬಳಿಕ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಹಾಜರಾತಿ, ಪೌಷ್ಟಿಕ ಆಹಾರ ವಿತರಣೆ, ಮಕ್ಕಳ ಬೆಳವಣಿಗೆಯ ದಾಖಲಾತಿ ಹಾಗೂ ಕೇಂದ್ರದ ಸ್ವಚ್ಛತೆಯನ್ನು ಕೂಲಂಕಷವಾಗಿ ಪರಿಶೀಲಿಸಿದರು.
ನಂತರ ವಡಗಾಂವ, ಜಂಬಗಿ ಹಾಗೂ ಸಂತಪೂರ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಗಳಿಗೆ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳ ಹಾಜರಾತಿ, ವಸತಿ ವ್ಯವಸ್ಥೆ, ಆಹಾರದ ಗುಣಮಟ್ಟ, ಕುಡಿಯುವ ನೀರು, ಶೌಚಾಲಯ ಹಾಗೂ ಮೂಲಸೌಕರ್ಯಗಳನ್ನು ಪರಿಶೀಲಿಸಿದರು. ಅಲ್ಲದೆ, ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಮುಂದುವರಿದು ವಡಗಾಂವ, ಸಂತಪೂರ ಹಾಗೂ ಜಂಬಗಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಸಿಬ್ಬಂದಿ ಹಾಜರಾತಿ, ಸಾರ್ವಜನಿಕರಿಗೆ ದೊರೆಯುತ್ತಿರುವ ವೈದ್ಯಕೀಯ ಸೇವೆ ಹಾಗೂ ಮೂಲಸೌಕರ್ಯಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು. ಸಾರ್ವಜನಿಕರಿಗೆ ಸರ್ಕಾರದ ಸೇವೆಗಳನ್ನು ಸಮರ್ಪಕವಾಗಿ ತಲುಪಿಸುವಲ್ಲಿ ಯಾವುದೇ ಲೋಪವಾಗಬಾರದು ಮತ್ತು ಎಲ್ಲಾ ಇಲಾಖೆಯ ಸಿಬ್ಬಂದಿ ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ್, ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎಇಇ ಮಾರುತಿ ರಾಠೋಡ, ಐಇಸಿ ಸಂಯೋಜಕ ಅಂಬಾದಾಸ ಪಾಟೀಲ್, ಪಿಡಿಒಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
