ಬೆಂಗಳೂರು: ಬೆಂಗಳೂರು–ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (BMIC) ಯೋಜನೆಯ ಬಿಡದಿ ವಲಯದಲ್ಲಿ ತಮ್ಮ ಜಮೀನುಗಳನ್ನು ಬಿಟ್ಟುಕೊಟ್ಟ 1,453 ರೈತರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಈ ಇಡೀ ಪ್ರಕ್ರಿಯೆಯನ್ನು ಮುಂದಿನ ಎರಡು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಅವರು ಗಡುವು ವಿಧಿಸಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, BMIC ಕುರಿತು ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿಯ ಅಧ್ಯಕ್ಷರಾಗಿರುವ ತಾವು, ಈವರೆಗೆ ಎಂಟು ಸಭೆಗಳನ್ನು ನಡೆಸಿ ಈ ವಿಚಾರವನ್ನು ಸವಿಸ್ತಾರವಾಗಿ ಚರ್ಚಿಸಿರುವುದಾಗಿ ತಿಳಿಸಿದರು.
ಒಟ್ಟು 1,453 ರೈತರು ಜಮೀನು ಕಳೆದುಕೊಂಡಿದ್ದರೂ, ಪ್ರಸ್ತುತ ಬಿಡದಿಯ ಸೆಕ್ಟರ್-ಎ ವ್ಯಾಪ್ತಿಯಲ್ಲಿ 574 ನಿವೇಶನಗಳು ಮಾತ್ರ ಲಭ್ಯವಿವೆ (30×40 ಅಡಿಯ 231 ನಿವೇಶನಗಳು ಹಾಗೂ 40×60 ಅಡಿಯ 243 ನಿವೇಶನಗಳು).
ಉಳಿದ 879 ನಿವೇಶನಗಳನ್ನು ವರಾಹಸಂದ್ರ, ಮಾದಾವರ, ಕೊಡಿಗೆನಹಳ್ಳಿ ಹಾಗೂ ಶ್ರೀಕಂಠಪುರ-ಲಿಂಗನಂದನಹಳ್ಳಿ ಪ್ರದೇಶಗಳಲ್ಲಿ ನೈಸ್ (NICE) ಕಂಪನಿಯ ಸಹಯೋಗದೊಂದಿಗೆ ನಿರ್ಮಿಸಿ ಒದಗಿಸಲಾಗುವುದು.
ಮೂಲ ಒಪ್ಪಂದದಲ್ಲಿ ನಿವೇಶನಗಳ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲದಿದ್ದರೂ, ಸುಪ್ರೀಂ ಕೋರ್ಟ್‌ನ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತನ್ನ ವಿವೇಚನೆ ಹಾಗೂ ಮಾನವೀಯ ನೆಲೆಯಲ್ಲಿ ರೈತರಿಗೆ ನಿವೇಶನ ನೀಡಲು ಈ ನಿರ್ಧಾರ ಕೈಗೊಂಡಿದೆ.
ಒಂದು ಎಕರೆವರೆಗೆ ಜಮೀನು ಹೊಂದಿರುವವರಿಗೆ 30×40 ಅಡಿ ಹಾಗೂ ಒಂದು ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರಿಗೆ 60×40 ಅಡಿ ನಿವೇಶನಗಳನ್ನು ಹಂಚಿಕೆ ಮಾಡಲು ಭರವಸೆ ನೀಡಲಾಗಿದ್ದು, ನಿಗದಿತ ಅವಧಿಯೊಳಗೆ ರೈತರಿಗೆ ನ್ಯಾಯ ಒದಗಿಸಲಾಗುವುದು ಎಂದು ಡಿಸಿಎಂ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
