ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ತಮ್ಮ ವೇಗವಾದ ಹಾಗೂ ಹೆಚ್ಚಿನ ಸಂಖ್ಯೆಯ ಪ್ರಕರಣಗಳ ವಿಲೇವಾರಿಯಿಂದ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಸೆಪ್ಟೆಂಬರ್ 02 ರಂದು ಒಂದೇ ದಿನ ಬರೋಬ್ಬರಿ 555 ಪ್ರಕರಣಗಳ ವಿಚಾರಣೆ ನಡೆಸಿ ಹೈಕೋರ್ಟ್ ಕಲಾಪದಲ್ಲಿ ಹೊಸ ಇತಿಹಾಸ ಹಾಗೂ ಮೈಲಿಗಲ್ಲು ಸೃಷ್ಟಿಸಿದ್ದಾರೆ.
ಸಾಮಾನ್ಯವಾಗಿ ಹೈಕೋರ್ಟ್ ಕಲಾಪಗಳು ನಿಗದಿತ ವೇಳೆಗೆ ಮುಕ್ತಾಯಗೊಳ್ಳುತ್ತವೆ. ಆದರೆ, ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿರುವ ಪೀಠವು ಸೆಪ್ಟೆಂಬರ್ 2ರಂದು ರಾತ್ರಿ 8:30 ಗಂಟೆಯವರೆಗೂ ಅರ್ಜಿಗಳ ವಿಚಾರಣೆ ನಡೆಸಿ ಅಚ್ಚರಿ ಮೂಡಿಸಿತು.
555 ಪ್ರಕರಣಗಳ ವಿಚಾರಣೆ: ಒಂದೇ ದಿನದಲ್ಲಿ ಒಟ್ಟು 555 ರಿಟ್ ಮತ್ತು ಕ್ರಿಮಿನಲ್ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಲಾಗಿದ್ದು, ಅದರಲ್ಲಿ ಒಟ್ಟು 85 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.
ತುರ್ತು ಅರ್ಜಿಗಳ ವಿಲೇವಾರಿ: ಬೆಳಗಿನ ಕಲಾಪದಲ್ಲಿ ನಿಗದಿತವಾಗಿದ್ದ 318 ಅರ್ಜಿಗಳ ವಿಚಾರಣೆ ಮುಗಿಸಿದ ಬಳಿಕ, ತುರ್ತು ವಿಚಾರಣೆಗೆ ಕೋರಿದ್ದ 240ಕ್ಕೂ ಹೆಚ್ಚು ಮೆಮೊಗಳನ್ನು ಸ್ವೀಕರಿಸಲಾಗಿತ್ತು. ಮಧ್ಯಾಹ್ನ 2:30ಕ್ಕೆ ಆರಂಭವಾದ ಕಲಾಪದಲ್ಲಿ ಈ ತುರ್ತು ಅರ್ಜಿಗಳನ್ನು ಕೇವಲ 2.5 ಗಂಟೆಗಳಲ್ಲಿ ವಿಚಾರಣೆ ನಡೆಸಲಾಯಿತು.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ತಮ್ಮ ಕಠಿಣ ಪರಿಶ್ರಮ, ತ್ವರಿತ ನ್ಯಾಯದಾನ ಹಾಗೂ ಮಹತ್ವದ ತೀರ್ಪುಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಅವರ ಈ ದಾಖಲೆ ಮಟ್ಟದ ಪ್ರಕರಣಗಳ ವಿಚಾರಣೆಯು ನ್ಯಾಯಾಂಗ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
