ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಹೆಸರಿನಲ್ಲಿ ಕೋಟ್ಯಂತರ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಬಹುಭಾಷಾ ನಟ ಪ್ರಕಾಶ್ ರಾಜ್ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್ನಲ್ಲಿ ‘ಚುನಾವಣಾ ಆಯೋಗ ಚಲೋ’ ಬೃಹತ್ ಪ್ರತಿಭಟನೆ ನಡೆಯಿತು.
ವಿವಿಧ ಸಂಘಟನೆಗಳು ಹಾಗೂ ಬಾಧಿತ ಮತದಾರರು ಭಾಗವಹಿಸಿದ್ದ ಈ ಸಮಾವೇಶದಲ್ಲಿ, ಎಲ್ಲರೂ ಒಟ್ಟಾಗಿ ‘ನನ್ನ ಮತ ನನ್ನ ಹಕ್ಕು’ ಎಂದು ಪ್ರತಿಜ್ಞೆ ಸ್ವೀಕರಿಸಿದರು.
ವೇದಿಕೆಯಲ್ಲಿ ಮಾತನಾಡಿದ ನಟ ಪ್ರಕಾಶ್ ರಾಜ್, ಎಸ್ ಐಆರ್ ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಮಾಡುವ ಬೃಹತ್ ಷಡ್ಯಂತ್ರ ಹಾಗೂ ಮೋಸ ಎಂದು ಕಟುವಾಗಿ ವಾಗ್ದಾಳಿ ನಡೆಸಿದರು. ಮುಂದಿನ ಚುನಾವಣೆಗೆ ಇನ್ನೂ ಎರಡು ವರ್ಷ ಸಮಯವಿರುವಾಗ, T20 ಮ್ಯಾಚ್ ನಂತೆ ಆತುರಾತುರವಾಗಿ ಈ ಪ್ರಕ್ರಿಯೆ ನಡೆಸುತ್ತಿರುವ ಉದ್ದೇಶವೇನು ಎಂದು ಪ್ರಶ್ನಿಸಿದರು. ಮತದಾರರಿಗೆ ಸರಿಯಾದ ಅರಿವು ಮೂಡಿಸದೇ, ಬಿಎಲ್ ಓ (BLO) ಸಿಬ್ಬಂದಿಗೆ ಸರಿಯಾದ ತರಬೇತಿ ನೀಡದೇ ಪರಿಶೀಲನೆ ಮುಗಿಸಿರುವುದನ್ನು ಖಂಡಿಸಿದರು. ನಾಗರಿಕರನ್ನು ‘ಆದರ್ಸ್’ ಎಂದು ವರ್ಗೀಕರಿಸಿರುವುದರ ಹಿಂದೆ ದಲಿತರು, ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರನ್ನು ಗುರಿಯಾಗಿಸಿರುವುದು ಕಾಣುತ್ತಿದೆ ಎಂದು ಆರೋಪಿಸಿದ ಅವರು, ಅಗತ್ಯಬಿದ್ದರೆ ಸಿನಿಮಾಗಳನ್ನು ತೊರೆದು ಬೀದಿಗಿಳಿದು ಹೋರಾಡಲು ಸಿದ್ಧನಿದ್ದೇನೆ ಎಂದು ಸವಾಲೆಸೆದರು.
ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಮತ್ತೊಬ್ಬ ನಟ ಕಿಶೋರ್, ಎಸ್ ಐಆರ್ ಪ್ರಕ್ರಿಯೆಯು ಆಡಳಿತಾತ್ಮಕ ಪ್ರಕ್ರಿಯೆಯಾಗಿರದೇ, ನಾಗರಿಕರ ಮೂಲಭೂತ ಮತದಾನದ ಹಕ್ಕನ್ನು ಕಸಿದುಕೊಳ್ಳುವ ವ್ಯವಸ್ಥಿತ ಸಂಚಾಗಿದೆ ಎಂದು ಆರೋಪಿಸಿದರು. ಸಂವಿಧಾನ ನೀಡಿರುವ ಸಮಾನತೆ ಮತ್ತು ಹಕ್ಕುಗಳನ್ನು ಕಿತ್ತುಕೊಂಡು ಮನುವಾದಿ ಮನಸ್ಥಿತಿಯ ವ್ಯವಸ್ಥೆಯನ್ನು ತರಲು ಹವಣಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪ್ರಕಾಶ್ ರಾಜ್ ಪ್ರಮುಖ ಮನವಿಗಳನ್ನು ಸಲ್ಲಿಸಿದರು. ಸಾರ್ವಜನಿಕರ ಪ್ರಶ್ನೆಗಳ ಪತ್ರವನ್ನು ಮುಖ್ಯ ಚುನಾವಣಾಧಿಕಾರಿಗೆ ತಲುಪಿಸಬೇಕು ಹಾಗೂ ಈ ಲೋಪಭರಿತ ಎಸ್ ಐಆರ್ ಅಂತಿಮ ಪಟ್ಟಿಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಬಾರದು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಕೇಂದ್ರ ಸರ್ಕಾರವು ಚುನಾವಣಾ ಆಯೋಗ ಮತ್ತು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಪ್ರತಿಭಟನಾಕಾರರ ಎಲ್ಲಾ ಬೇಡಿಕೆಗಳನ್ನು ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ತಲುಪಿಸುವುದಾಗಿ ಭರವಸೆ ನೀಡಿದರು. ಬಳಿಕ ರಾಜ್ಯ ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
