ಹೊಳೆನರಸೀಪುರ: “ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ” ಎಂಬ ಗಾದೆಯಂತೆ ಸ್ಥಳೀಯ ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಐತಿಹಾಸಿಕ ಎಣ್ಣೆಹೊಳೆ ಬೆಟ್ಟದ ರಂಗನಾಥ ದೇವಸ್ಥಾನದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ2ದ್ದಾರೆ ಎಂದು ಭಕ್ತರು ಹಾಗೂ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹೊಳೆನರಸೀಪುರ ಪಟ್ಟಣದಿಂದ ಕೇವಲ 2 ಕಿಲೋಮೀಟರ್ ದೂರದಲ್ಲಿರುವ ಈ ಬೆಟ್ಟಕ್ಕೆ ತೆರಳಲು ಸೂಕ್ತ ರಸ್ತೆಯಿಲ್ಲದೆ, ಭಕ್ತರು ಬಂಡೆಗಳು, ಕಲ್ಲುಗುಡ್ಡಗಳು ಹಾಗೂ ಗಿಡಗಂಟೆಗಳ ನಡುವೆ ಸುಮಾರು 1 ಕಿಲೋಮೀಟರ್ ದೂರ ನಡೆದುಕೊಂಡೇ ಸಾಗಬೇಕಾದ ಶೋಚನೀಯ ಸ್ಥಿತಿಯಿದೆ.
ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಮಾಡಲು ಯಾವುದೇ ತಡೆಗೋಡೆ (Barricade) ಅಥವಾ ಗ್ರಿಲ್ಸ್ ವ್ಯವಸ್ಥೆ ಇಲ್ಲದಿರುವುದು ಭಕ್ತರ ಜೀವಕ್ಕೆ ಮುಳುವಾಗಿದೆ. ಆಕಸ್ಮಿಕವಾಗಿ ಕಾಲುಜಾರಿದರೆ ಸಾವಿರಾರು ಅಡಿ ಪಾತಾಳಕ್ಕೆ ಬೀಳುವ ಆತಂಕವಿದ್ದು, ವಯೋವೃದ್ಧರು ಹಾಗೂ ಮಕ್ಕಳು ಭಯದ ನೆರಳಲ್ಲೇ ದರ್ಶನ ಪಡೆಯುವಂತಾಗಿದೆ.
ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಈ ದೇವಾಲಯದ ಅಭಿವೃದ್ಧಿಗೆ ಕೆಲ ತಿಂಗಳ ಹಿಂದೆ ಹಾಸನ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರೂ, ಕಂದಾಯ ಇಲಾಖೆಯ ಕಡತಗಳಲ್ಲಿ ಮಾತ್ರ ಆದೇಶ ಸೀಮಿತವಾಗಿದ್ದು, ಧರಾಶಾಯಿಯಾಗಿದೆ.
ಮಾವಿನಕೆರೆ ದೇವಸ್ಥಾನದ ಅಭಿವೃದ್ಧಿಗೆ ತೋರುವ ಕಾಳಜಿಯನ್ನು ಶಾಸಕರು ಮತ್ತು ಅವರ ಕುಟುಂಬದವರು ಎಣ್ಣೆಹೊಳೆ ರಂಗನಾಥ ಸ್ವಾಮಿ ದೇವಸ್ಥಾನದ ಕಡೆ ತೋರದೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಶ್ರಾವಣ ಮಾಸ ಹಾಗೂ ಇತ್ಯಾದಿ ವಿಶೇಷ ದಿನಗಳಲ್ಲಿ ಸಾವಿರಾರು ಭಕ್ತರು ಆಗಮಿಸುವ ಈ ಕ್ಷೇತ್ರಕ್ಕೆ ಕೂಡಲೇ ಸುಸಜ್ಜಿತ ರಸ್ತೆ, ಕುಡಿಯುವ ನೀರು, ವಿದ್ಯುತ್ ಹಾಗೂ ರಕ್ಷಣಾ ಗೋಡೆಯನ್ನು ನಿರ್ಮಿಸಬೇಕು. ಒಂದು ವೇಳೆ ಮುಂದಿನ ದಿನಗಳಲ್ಲಿ ಯಾವುದೇಪ್ರಾಣಾಪಾಯ ಸಂಭವಿಸಿದರೆ ಸಂಪೂರ್ಣ ಆಡಳಿತ ವ್ಯವಸ್ಥೆಯೇ ಹೊಣೆ ಹೊರಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
ವರದಿ: ಮಂಜು ಶ್ರವಣೂರು, ಹೊಳೆನರಸೀಪುರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
