ಬಳ್ಳಾರಿ: ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ, ಸ್ಥಳದಲ್ಲೇ ಅಥವಾ ನಿಗದಿತ ಕಾಲಮಿತಿಯಲ್ಲಿ ಪರಿಹಾರ ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ನೂತನವಾಗಿ ರೂಪಿಸಿರುವ ಮಹತ್ವಾಕಾಂಕ್ಷೆಯ ‘ಪ್ರಜಾಸೇವಾ ಅಭಿಯಾನ’ವು ಸೆಪ್ಟೆಂಬರ್ 5 ರಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹೋಬಳಿಯಿಂದ ಅಧಿಕೃತವಾಗಿ ಪ್ರಾರಂಭವಾಗಲಿದೆ.
ಜನರು ತಮ್ಮ ಸಣ್ಣಪುಟ್ಟ ಸಮಸ್ಯೆಗಳಿಗೂ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಜನರ ಮನೆ ಬಾಗಿಲಿಗೆ ಆಡಳಿತ ಕೊಂಡೊಯ್ಯುವುದು ಹೊಸದಾಗಿ ರಚಿಸಲಾದ ‘ಪ್ರಜಾಸೇವಾ ಇಲಾಖೆ’ಯ ಪ್ರಮುಖ ಗುರಿಯಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದ್ದಾರೆ. ಹಿಂದೆ ಸರ್ಕಾರದ ಸೇವೆಗಳನ್ನು ಪಡೆಯಲು ಅಥವಾ ಯೋಜನೆಯ ಪ್ರಯೋಜನಗಳು ತಲುಪದೇ ಇದ್ದಾಗ ಸಾರ್ವಜನಿಕರು ಹರಸಾಹಸ ಪಡಬೇಕಾದ ಪರಿಸ್ಥಿತಿ ಇತ್ತು. ಆದರೆ ಇನ್ನು ಮುಂದೆ ಕ್ಷಣಾರ್ಧದಲ್ಲಿ ಯಾವುದೇ ರೀತಿಯ ಕುಂದುಕೊರತೆಗಳನ್ನು ಸರ್ಕಾರದ ಬಳಿ ಹೇಳಿಕೊಳ್ಳಬಹುದು. ಈ ಅಭಿಯಾನವು ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ ಪರಿಹಾರ ಒದಗಿಸುವ ಏಕೀಕೃತ ವ್ಯವಸ್ಥೆಯಾಗಲಿದೆ.
ಪ್ರಮುಖ ಉದ್ದೇಶಗಳು:
- ಸಾರ್ವಜನಿಕರು ತಮ್ಮ ಸಣ್ಣಪುಟ್ಟ ಸಮಸ್ಯೆಗಳಿಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದು.
- ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ ಕಾಲಮಿತಿಯಲ್ಲಿ ವಿಲೇವಾರಿ ಮಾಡುವುದು.
- ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸುವುದು.
ಪ್ರತಿ ಶನಿವಾರ ತಾಲ್ಲೂಕು ಮತ್ತು ಹೋಬಳಿ ಮಟ್ಟದ ಪ್ರಜಾಸೇವಾ ಅಭಿಯಾನ ಸಭೆಗಳನ್ನು ಪರ್ಯಾಯವಾಗಿ ರಾಜ್ಯಾದ್ಯಂತ ನಡೆಸಲು ಕ್ರಮವಹಿಸಲಾಗಿದೆ. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಕೇಂದ್ರದಲ್ಲಿ ಸಭೆ ನಡೆಯುತ್ತದೆ. ಎರಡನೇ ಮತ್ತು ನಾಲ್ಕನೇ ಶನಿವಾರದಂದು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಅಥವಾ ಹೋಬಳಿ ಮಟ್ಟದಲ್ಲಿ ಸಭೆ ಆಯೋಜಿಸಲಾಗುತ್ತದೆ. 3 ರಿಂದ 4 ತಿಂಗಳಲ್ಲಿ ಎಲ್ಲಾ ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಸಭೆಗಳನ್ನು ಏರ್ಪಡಿಸಲು ಏಕೀಕೃತ ಕ್ಯಾಲೆಂಡರ್ ಆಫ್ ಇವೆಂಟ್ಸ್ ತಯಾರಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಸಭೆ ನಡೆಯುವ ಅಂದೇ ಅದೇ ಕ್ಷೇತ್ರದಲ್ಲಿ ಪ್ರತ್ಯೇಕ ಹೋಬಳಿ ಮಟ್ಟದ ಶಾಸಕರ ಸಭೆ ನಡೆಯುವುದಿಲ್ಲ, ಬದಲಾಗಿ ಸಂಬಂಧಿಸಿದ ಶಾಸಕರು ಸಚಿವರ ಸಭೆಯಲ್ಲಿ ಭಾಗವಹಿಸುತ್ತಾರೆ. ಎಲ್ಲಾ ಸಭೆಗಳಲ್ಲಿ ಸ್ಥಳೀಯ ಮಾಜಿ ಜನಪ್ರತಿನಿಧಿಗಳು ಹಾಗೂ ಮುಖಂಡರಿಗೂ ಆಹ್ವಾನ ನೀಡಲಾಗುತ್ತದೆ.
ಅಭಿಯಾನದ ಸಭೆಗಳ ಕುರಿತು ಕನಿಷ್ಠ 15 ದಿನಗಳ ಮುಂಚಿತವಾಗಿ ಮನೆ-ಮನೆಗೆ ಕರಪತ್ರಗಳನ್ನು ವಿತರಿಸಿ ಮಾಹಿತಿ ನೀಡಲಾಗುತ್ತದೆ. ಇದರಲ್ಲಿ ಪೂರ್ವಮುದ್ರಿತ ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲೆಗಳ ಪರಿಶೀಲನಾ ಪಟ್ಟಿ ಇರುತ್ತದೆ. ಜತೆಗೆ ಕೃತಕ ಬುದ್ಧಿಮತ್ತೆ ಆಧಾರಿತ ಕಾಲ್ ಸೆಂಟರ್ ಮೂಲಕವೂ ಮಾಹಿತಿ ನೀಡಲಾಗುತ್ತದೆ. ಸಾರ್ವಜನಿಕರು ಗ್ರಾಮ ಒನ್ ಕೇಂದ್ರದಲ್ಲಿ ಅಥವಾ ಸಭೆಯ ಸ್ಥಳದಲ್ಲಿ ಸ್ಥಾಪಿಸಲಾಗುವ ಮಳಿಗೆಗಳ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಸಭೆಯ ದಿನದಂದು ಹೊಸ ಅಹವಾಲುಗಳು ಮತ್ತು ಪರಿಹಾರವಾಗದ ಅಥವಾ 21 ದಿನಗಳ ನಂತರವೂ ಸಮರ್ಪಕ ಪರಿಹಾರ ದೊರೆಯದ ಹಳೆಯ ಅಹವಾಲುಗಳೆಂಬ ಎರಡು ಪ್ರತ್ಯೇಕ ಸರತಿಗಳಲ್ಲಿ ಅರ್ಜಿಗಳನ್ನು ನಿರ್ವಹಿಸಲಾಗುತ್ತದೆ. ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಮಂಜೂರಾತಿ ಪತ್ರ ಹಾಗೂ ದೃಢೀಕರಣ ಪತ್ರಗಳನ್ನು ವಿತರಿಸಲಾಗುತ್ತದೆ. ನಾಗರಿಕರು ಸಹಾಯವಾಣಿ ಸಂಖ್ಯೆ 1902 ಅಥವಾ ಅಧಿಕೃತ ಪೋರ್ಟಲ್ ಮೂಲಕ ಕುಂದುಕೊರತೆ ದಾಖಲಿಸಬಹುದು.
ಪ್ರತಿ ಬುಧವಾರದ ಮೂರು ಹಂತದ ಪರಿಶೀಲನಾ ವ್ಯವಸ್ಥೆ:
- ಸಭೆಗಳಲ್ಲಿ ಸ್ವೀಕರಿಸಲಾದ ಅರ್ಜಿಗಳನ್ನು ಪ್ರತಿ ಬುಧವಾರ ಮೂರು ಹಂತಗಳಲ್ಲಿ ಪರಿಶೀಲಿಸಲಾಗುತ್ತದೆ:
- ಬೆಳಿಗ್ಗೆ 09 ರಿಂದ 11 ಗಂಟೆಯ ವರೆಗೆ ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಇಒ ನೇತೃತ್ವದಲ್ಲಿ ತಾಲ್ಲೂಕು ಮಟ್ಟದ ಪರಿಶೀಲನೆ ನಡೆಯುತ್ತದೆ.
- ಬೆಳಿಗ್ಗೆ 11 ರಿಂದ ಮಧ್ಯಾಹ್ನ 01 ಗಂಟೆಯ ವರೆಗೆ ಉಪವಿಭಾಗದ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಉಪವಿಭಾಗ ಮಟ್ಟದ ಪರಿಶೀಲನೆ ನಡೆಯುತ್ತದೆ.
- ಮಧ್ಯಾಹ್ನ 03 ರಿಂದ ಸಂಜೆ 05 ಗಂಟೆಯ ವರೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಪರಿಶೀಲನೆ ನಡೆಯುತ್ತದೆ.
ನಿಗದಿತ ಅವಧಿಯೊಳಗೆ ವಿಲೇವಾರಿಯಾಗದ ಅರ್ಜಿಗಳು ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರಿಗೆ ಸ್ವಯಂಚಾಲಿತವಾಗಿ ಮೇಲ್ದರ್ಜೆಗೆ ವರ್ಗಾಯಿಸಲ್ಪಡುತ್ತವೆ. ಪ್ರತಿ ಜಿಲ್ಲೆಗೆ ನೇಮಕಗೊಂಡಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸಭೆಗೆ ಪೂರ್ವಭಾವಿ ಸಿದ್ಧತೆ ಹಾಗೂ ಮೇಲ್ವಿಚಾರಣೆ ನಡೆಸಲಿದ್ದಾರೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಪರಿಶೀಲನಾ ಸಭೆಯಲ್ಲಿ ಬಾಕಿ ಉಳಿದಿರುವ ಅರ್ಜಿಗಳ ಪ್ರಗತಿಯನ್ನು ಅವಲೋಕಿಸಲಾಗುತ್ತದೆ. ಸಂವಿಧಾನದ ಆಶಯದಂತೆ ಜನಪರ ಆಡಳಿತ ನೀಡಲು ರೂಪಿಸಿರುವ ಈ ಅಭಿಯಾನದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಕರೆ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
