ಕುಣಿಗಲ್: ಕ್ರೀಡೆ ಕ್ರೀಡಾಪಟುಗಳ ಸ್ನೇಹ ಸಂಕೇತದ ಕೊಂಡಿಯಾಗಿದ್ದು, ಯುವ ಕ್ರೀಡಾಪಟುಗಳನ್ನು ಒಗೂಡಿಸುವ ಆಟವಾಗಿದೆ. ಹಾಗಾಗಿ ಕ್ರೀಡಾಪಟುಗಳು ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಬೇಕೆಂದು ತಹಶೀಲ್ದಾರ್ ಎನ್.ಆರ್.ಕರಿಯಾನಾಯ್ಕ್ ತಿಳಿಸಿದರು.
ಅವರು ಮಂಗಳವಾರ ಪಟ್ಟಣದ ಜೆಕೆಬಿಎಂಎಸ್ ಶಾಲಾ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಅರವಿಂದ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 2026-27ನೇ ಸಾಲಿನ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದರು.
ಪ್ರತಿಯೊಬ್ಬರು ಕ್ರೀಡೆಯಲ್ಲಿ ಉತ್ತಮ ತರಬೇತಿ ಹೊಂದಿ ತಾಲ್ಲೂಕು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸುವ ಮೂಲಕ ತಾಲ್ಲೂಕಿಗೆ ಕೀರ್ತಿ ತರಬೇಕು. ಹಾಗಾಗಿ ಶಿಕ್ಷಣಾಭ್ಯಾಸದ ಜೊತೆಗೆ ಕ್ರೀಡೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಧ್ವಜವಂದನೆ ಸ್ವೀಕರಿಸಿ ಮಾತನಾಡಿದ, ಕುಣಿಗಲ್ ವೃತ್ತ ನಿರೀಕ್ಷಕ ಮಾಧ್ಯಾನಾಯ್ಕ್ ತಾಲ್ಲೂಕು ಕ್ರೀಡೆ, ಸಾಂಸ್ಕೃತಿಕ ಮತ್ತು ವಿದ್ಯಾಭ್ಯಾಸಕ್ಕೆ ಅತ್ಯಂತ ಹೆಚ್ಚಿನ ಮಹತ್ವವನ್ನು ನೀಡುತ್ತಿರುವುದು ವಿಶೇಷವಾಗಿದೆ. ಯಾರು ಗೆಲ್ಲುತ್ತಾರೆ ಎನ್ನುವುದು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯವಾಗಿದೆ. ಕ್ರೀಡೆಯಲ್ಲಿ ಪ್ರತಿಯೊಬ್ಬರಿಗೂ ಗುರಿ ಮುಖ್ಯ. ತನ್ನ ಗುರಿ ಮುಟ್ಟಲು ಗುರು ಮುಖ್ಯ ಎಂದು ಹೇಳಿದರು.
ಕಸಾಪ ಅಧ್ಯಕ್ಷ ಡಾ.ಕಪನಿಪಾಳ್ಯ ರಮೇಶ್ ಮಾತನಾಡಿ, ಯಶಸ್ಸು ಎನ್ನುವುದು ಸಾಮಾನ್ಯವಲ್ಲ, ಅದು ಗಳಿಕೆಯಿಂದ ಸಾಧ್ಯ. ಕ್ರೀಡಾಕೂಟಗಳಲ್ಲಿ ಎಲ್ಲರೂ ಯಶಸ್ಸಿನ ಕಡೆಗೆ ಗಮನ ಹರಿಸುವುದು ಮುಖ್ಯ. ಕ್ರೀಡಾ ಜ್ಯೋತಿಯು ನಮ್ಮಲ್ಲರ ಸಂಕೇತವಾಗಿದೆ. ಕತ್ತಲಿಂದ ಬೆಳಕಿನಡೆಗೆ ಸಾಗಲು ಇದು ನೆರವಾಗುತ್ತದೆ. ಉತ್ತಮವಾಗಿ ರೂಪಗೊಂಡಿರುವ ಕ್ರೀಡಾಕೂಟವು ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ತಾಲ್ಲೂಕಿನ 21 ಕಾಲೇಜುಗಳಿಂದ ಒಂದು ಸಾವಿರದ ಐದು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿದರು. ಸಮಾರಂಭದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಸಿ.ಶಿವಣ್ಣ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಶಿವಕುಮಾರ್, ಪ್ರಾಚಾರ್ಯರಾದ ಮನೋಜ್ಕುಮಾರ್, ಗೋವಿಂದೇಗೌಡ, ವೆಂಕಟಮುನಿರೆಡ್ಡಿ, ಎಚ್.ಎಲ್.ಹರೀಶ್ ಕುಮಾರ್, ಕೆ.ಎಸ್.ಶ್ರೀನಾಥ್, ಅರವಿಂದ ಕಾಲೇಜಿನ ಕೋಆರ್ಡಿನೇಟರ್ ಆಂಥೋಣಿ, ದೈಹಿಕ ಶಿಕ್ಷಕರಾದ ಮಣಿಕಂಠನ್, ಅಜೀಜ್ ಉಲ್ಲಾ, ಉಪನ್ಯಾಸಕ ಪುಟ್ಟಸ್ವಾಮಿಗೌಡ ಇದ್ದರು.
ವಿದ್ಯಾರ್ಥಿಗಳು ಹೊರಂಗಣ ಕ್ರೀಡೆಗಳಿಗಿಂತ ಮೊಬೈಲ್ ಬಳಕೆ ದಾಸ್ಯಕ್ಕೆ ಒಳಗಾಗುತ್ತಿರುವುದು ಕಳವಳಕಾರಿಯಾಗಿದೆ. ಇದರಿಂದ ಹೊರಬಂದು ಕ್ರೀಡಾಕೂಟದಲ್ಲಿ ಭಾಗವಹಿಸಬೇಕು. ವಿದ್ಯಾರ್ಥಿಗಳು ಪಠ್ಯದ ಜೊತೆ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಉತ್ತಮ ಆರೋಗ್ಯ ಸಿಗುತ್ತದೆ.
— ಮಾಧ್ಯಾನಾಯ್ಕ್ ವೃತ್ತ ನಿರೀಕ್ಷಕರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
