ಕುಣಿಗಲ್: ತಿರುಮಲ ಪಾದಯಾತ್ರಾ ಸಮಿತಿ ವತಿಯಿಂದ 19 ನೇ ವರ್ಷದ ತಿರುಮಲ, ತಿರುಪತಿ ಪಾದಯಾತ್ರೆ ಅಂಗವಾಗಿ ಪಟ್ಟಣದ ದಿವ್ಯ ಕನ್ವೆನ್ಷನ್ ಹಾಲ್‌ನಲ್ಲಿ ಆ.23 ಭಾನುವಾರ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಮುಖ್ಯಸ್ಥ ಕೆ.ಎಸ್.ಬಲರಾಮ್ ತಿಳಿಸಿದ್ದಾರೆ. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಶ್ರೀನಿವಾಸ ಕಲ್ಯಾಣೋತ್ಸವವು ಹಿಂದೂ ಧರ್ಮದಲ್ಲಿ ಭಗವಾನ್ ಶ್ರೀನಿವಾಸ (ವೆಂಕಟೇಶ್ವರ) ಮತ್ತು ದೇವಿಯರಾದ ಶ್ರೀದೇವಿ ಹಾಗೂ ಭೂದೇವಿ ಅವರ ದಿವ್ಯ ವಿವಾಹ ಮಹೋತ್ಸವ ಆಚರಿಸುವ ಪವಿತ್ರ ಧಾರ್ಮಿಕ ಸೇವೆಯಾಗಿದೆ. ಈ ನಿಟ್ಟಿನಲ್ಲಿ ತಿರುಮಲ ಪಾದಯಾತ್ರಾ ಸಮಿತಿ ವತಿಯಿಂದ ಕಳೆದ ಹತ್ತು ವರ್ಷಗಳ ಹಿಂದೆ ಪ್ರಥಮ ಬಾರಿಗೆ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಹಮ್ಮಿಕೊಳ್ಳಲಾಗಿತ್ತು. ಈಗ ಎರಡನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವವನ್ನು ಎಲ್ಲಾ ಪಾದಯಾತ್ರಿಗಳು ಸೇರಿ ಮಾಡುತ್ತಿದ್ದೇವೆ. ಕಲ್ಯಾಣೋತ್ಸವದಲ್ಲಿ ಪಾದಯಾತ್ರಿಗಳು ಸೇರಿದಂತೆ ಸುಮಾರು 15 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಲಿದ್ದಾರೆ. ಅಲ್ಲದೆ 500 ಮಂದಿ ದಾಸಪ್ಪ ಹಾಗೂ 500 ಮಂದಿ ವೈಷ್ಣವ ಅರ್ಚಕರು ಕಲ್ಯಾಣೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ ಎಂದರು.
ಡಾ.ಶೆಲ್ವಪಿಳ್ಳೈ ಅಯ್ಯಂಗಾರ್ ನೇತೃತ್ವದಲ್ಲಿ ಕಾರ್ಯಕ್ರಮ: ಭಾನುವಾರ ಬೆಳಿಗ್ಗೆ ಸುಪ್ರಭಾತ ಸೇವೆ, 8 ಗಂಟೆಗೆ ಅಭಿಷೇಕ, ದೇವರಿಗೆ ಹೂವಿನ ಅಲಂಕಾರ, ಸಂಕಲ್ಪ ಲಕ್ಷ್ಮೀನಾರಾಯಣ ಹೋಮ, ಪೂರ್ಣಾಹುತಿ, ಪ್ರಾಕಾರೋತ್ಸವ, ನಿವೇದನ, ಮಹಾಮಂಗಳಾರತಿ ಹಾಗೂ ವೈದಿಕ ಮಂತ್ರಗಳೊಂದಿಗೆ ಹವಳ, ಮಾಂಗಲ್ಯ ಧಾರಣೆ ಮತ್ತು ಹೂವಿನ ಪೂಜೆಗಳ ಜೊತೆಗೆ ಭಗವಾನ್ ಶ್ರೀನಿವಾಸ ಕಲ್ಯಾಣೋತ್ಸವ ಮಧ್ಯಾಹ್ನ 12 ಗಂಟೆಯವರೆಗೆ ನಡೆಯಲಿದೆ.
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಅಧ್ಯಕ್ಷ ಯತಿರಾಜ ದಾಸರ್ ಡಾ.ಶೆಲ್ವಪಿಳ್ಳೈ ಅಯ್ಯಂಗಾರ್ ಅವರ ನೇತೃತ್ವದಲ್ಲಿ ಕಲ್ಯಾಣೋತ್ಸವ ನಡೆಯಲಿದೆ. ಈ ವೇಳೆ ಜನರಿಗೆ ಆಗಮಶಾಸ್ತ್ರ ಸಂಪ್ರದಾಯ ಹಾಗೂ ನಮ್ಮ ಧಾರ್ಮಿಕ ಆಚರಣೆ ಹಿನ್ನೆಲೆಯನ್ನು ಭಕ್ತಾದಿಗಳಿಗೆ ತಿಳಿಸಿಕೊಡಲಿದ್ದಾರೆ ಎಂದು ಹೇಳಿದರು.
ಲಡ್ಡು ಪ್ರಸಾದ ವಿತರಣೆ: ಕಲ್ಯಾಣೋತ್ಸವದಲ್ಲಿ ಭಾಗವಹಿಸುವ ಭಕ್ತರಿಗೆ ತೀರ್ಥ ಪ್ರಸಾದ ಹಾಗೂ ಲಡ್ಡು ವಿತರಣೆ ಜೊತೆಗೆ ಶ್ರೀನಿವಾಸನ ವಿವಾಹ ಮಹೋತ್ಸವದ ಪ್ರಯುಕ್ತ ಬಾಳೆ ಎಲೆ ಊಟದ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಪರಮಾತ್ಮನ ಕೃಪೆಗೆ ಪಾತ್ರರಾಗಬೇಕೆಂದು ಅವರು ತಿಳಿಸಿದ್ದಾರೆ.
ಮೆರವಣಿಗೆ: ಶ್ರೀನಿವಾಸ ಕಲ್ಯಾಣೋತ್ಸವ ಮುಗಿದ ಬಳಿಕ ಉತ್ಸವ ಮೂರ್ತಿಗಳ ಮೆರವಣಿಗೆಯನ್ನು ಕುಣಿಗಲ್ ಪಟ್ಟಣದ ಪ್ರಮುಖ ಬೀದಿಯಲ್ಲಿ ಅದ್ಧೂರಿಯಾಗಿ ನಡೆಸಲು ಉದ್ದೇಶಿಸಲಾಗಿದೆ. ಮಳೆ ಬರದಿದ್ದಲ್ಲಿ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
