ತುಮಕೂರು: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಯಿತು.
ಸಭೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಹಾಗೂ ಅನುಷ್ಠಾನದ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯ ಕಾರ್ಯನಿರ್ವಹಣೆ ಹಾಗೂ ವಿವಿಧ ಇಲಾಖೆಗಳ ನಡುವಿನ ಸಮನ್ವಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಹಲವು ಮಹತ್ವದ ಸೂಚನೆ ನೀಡಿದರು.
ಸಮಿತಿಯ ಸದಸ್ಯರು ತಮ್ಮ ವ್ಯಾಪ್ತಿಗೆ ಒಳಪಡುವ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಕುರಿತು ವಾರಕ್ಕೊಮ್ಮೆ ಸಭೆ ನಡೆಸಿ, ಸಭೆಯ ನಡಾವಳಿಯನ್ನು ನಿಗದಿತ ನಮೂನೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸುವಂತೆ ಸೂಚಿಸಿದರು.
ಸಮಿತಿಯ ಕಾರ್ಯದರ್ಶಿಗಳು ಸಂಬಂಧಿಸಿದ ಅಧಿಕಾರಿ ಒಂದಿಗೆ ಸಮನ್ವಯ ಸಾಧಿಸಿ, ಅಗತ್ಯ ಮಾಹಿತಿಯನ್ನು ಜಿಲ್ಲಾ ಮಟ್ಟದ ಸಮಿತಿಗೆ ಸಲ್ಲಿಸುವಂತೆ ತಿಳಿಸಿದರಲ್ಲದೆ, ಪ್ರತಿವಾರದ ಅಂತ್ಯದಂದು ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಗೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಿ, ತಮ್ಮ ಇಲಾಖೆಗಳ ವಾರದ ಪ್ರಗತಿ ವಿವರಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದರು.
ಮೂರು ತಿಂಗಳಿಗೊಮ್ಮೆ ಸಭೆ ಜಿಲ್ಲಾ ಮಟ್ಟದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸಮಿತಿ ಸಭೆಯನ್ನು ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಉಪಮುಖ್ಯಮಂತ್ರಿಗಳು ಹಾಗೂ ಕರ್ನಾಟಕ ಸರ್ಕಾರದ ಅಧೀನದಲ್ಲಿ ನಡೆಯುವ ಜಿಲ್ಲಾ ಮಟ್ಟದ ಸಭೆಗಳಿಗೆ ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಿ, ತಮ್ಮ ವ್ಯಾಪ್ತಿಯ ಕಾಮಗಾರಿಗಳ ಸಮಗ್ರ ಮಾಹಿತಿಯನ್ನು ಮಂಡಿಸುವಂತೆ ತಿಳಿಸಿದರಲ್ಲದೆ, ಜೂನ್ 2026ರ ಮಾಹೆಯಲ್ಲಿ ತುಮಕೂರು ಮಿಷನ್ ಕುರಿತು ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ/ಅನುಷ್ಠಾನಕ್ಕಾಗಿ ಸಮಿತಿ ರಚಿಸಿದ್ದು, ಎಲ್ಲಾ ವಿಧಾನಸಭಾ ಕ್ಷೇತ್ರಗಳ ನೋಡಲ್ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲಿಸಿದರು.
ಪ್ರತಿ ತಾಲೂಕಿನ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ವಾರಕ್ಕೊಮ್ಮೆ ವಿಧಾನಸಭಾ ಕ್ಷೇತ್ರ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿ, ಸಂಬಂಧಿಸಿದ ಎಲ್ಲಾ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸುವಂತೆ ಸೂಚಿಸಿದರು. ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲಿ ಅಗತ್ಯ ಸಹಕಾರ, ಸಲಹೆ ಹಾಗೂ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಮತ್ತು ವೇಗವನ್ನು ಖಚಿತ ಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಿದ ಅವರು, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ (ಅಭಿವೃದ್ಧಿ) ಮತ್ತು ಮುಖ್ಯ ಯೋಜನಾಧಿಕಾರಿಗಳು ಎಲ್ಲಾ ನೋಡಲ್ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರೋಢೀಕರಿಸಿ ಇವರಿಬ್ಬರು ಜಂಟಿಯಾಗಿ ವಿವಿಧ ಇಲಾಖೆಗಳು/ಏಜೆನ್ಸಿಗಳು ಈವರೆಗೆ ಕೈಗೊಂಡಿರುವ ಕಾಮಗಾರಿಗಳ ಪ್ರಗತಿಯ ಕುರಿತು ಪರಿಶೀಲಿಸಿ ಕ್ರೋಢೀಕೃತ ಮಾಹಿತಿಯನ್ನು ಆಗಸ್ಟ್ 20ರ ಅಪರಾಹ್ನ 3 ಗಂಟೆಯ ಸಭೆಗೆ ಪ್ರಸ್ತುತ ಪಡಿಸಲು ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಹಾಗೂ ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಅನುಷ್ಠಾನ ಏಜೆನ್ಸಿಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
