ಮಧುಗಿರಿ: ತಾಲ್ಲೂಕಿನ ಮಿಡಿಗೆಶಿ ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 10 ಮಂದಿ ನೌಕರರಿಗೆ 2024ರ ಅಂತ್ಯದವರೆಗೆ ಬರೋಬ್ಬರಿ 10,89,164 ರೂ.ಗಳ ವೇತನ ಬಾಕಿ ಉಳಿದಿದ್ದು, ಇದುವರೆಗೂ ಪಂಚಾಯತಿ ಅಧಿಕಾರಿಗಳು ಬಿಡುಗಡೆ ಮಾಡದಿರುವುದು ನೌಕರರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ.
ಪ್ರಸ್ತುತ ಸಾಲಿನ ಎರಡು ತಿಂಗಳುಗಳು ಕಳೆದು ಮೂರನೇ ತಿಂಗಳು ಪ್ರಾರಂಭವಾಗಿದ್ದರೂ, ಇಲ್ಲಿನ ಸಿಬ್ಬಂದಿಗಳಿಗೆ ಇದುವರೆಗೂ ಒಂದು ರೂ ವೇತನ ಕೂಡ ಕೈ ಸೇರಿಲ್ಲ. ಪರಿಣಾಮವಾಗಿ ನೌಕರರು ತಮ್ಮ ಸಂಸಾರವನ್ನು ಹೇಗೆ ನಿರ್ವಹಿಸುವುದು ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸುವುದು ಹೇಗೆ ಎಂದು ದಿಕ್ಕು ತೋಚದೆ ಕಣ್ಣೀರಿನಲ್ಲಿ ಕಾಲ ಕಳೆಯುವಂತಾಗಿದೆ.
ಪಂಚಾಯತಿಯಲ್ಲಿ ಕರವಸೂಲಿಗಾರರಾದ ಕೆಂಚಪ್ಪ, ನರಸಿಂಹಮೂರ್ತಿ, ಗೋವಿಂದಪ್ಪ, ನರಸಿಂಹರೆಡ್ಡಿ, ಲಕ್ಷ್ಮೀನರಸಪ್ಪ, ಸೋಮಶೇಖರಪ್ಪ, ರಂಗಶಾಮಯ್ಯ, ಪುಟ್ಟರಾಜು ಹಾಗೂ ನೀರು ವಿತರಕ ರಾಜು ಸೇರಿದಂತೆ ಒಟ್ಟು 10 ನೌಕರರು ಸಂಕಷ್ಟದಲ್ಲಿದ್ದಾರೆ.
ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ನೌಕರರು ಹಿಂದುಳಿದ ವರ್ಗದ ಜನಾಂಗಕ್ಕೆ ಸೇರಿದವರಾಗಿದ್ದು, ದಿನನಿತ್ಯದ ಜೀವನ ನಿರ್ವಹಣೆಗಾಗಿ ಅಂಗಡಿಗಳಲ್ಲಿ ಸಾಲ ಪಡೆಯಲು ಹೋದರೆ, ಮಾಸಿಕ ವೇತನವೇ ಸಿಗದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಯಾವ ಆಧಾರದ ಮೇಲೆ ಸಾಲ ನೀಡಬೇಕು ಎಂಬ ಪ್ರಶ್ನೆ ಎದ್ದಿದೆ.
ಕೂಡಲೇ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತಿ ಉನ್ನತ ಮಟ್ಟದ ಅಧಿಕಾರಿಗಳು, ಗ್ರಾಮೀಣಾಭಿವೃದ್ಧಿ ಸಚಿವರು, ಸ್ಥಳೀಯ ಜನಪ್ರತಿಧಿಗಳು ಹಾಗೂ ಸಂಸತ್ ಸದಸ್ಯರು ಮಧ್ಯಪ್ರವೇಶಿಸಿ, ಮಿಡಿಗೆಶಿ ಗ್ರಾಮ ಪಂಚಾಯತಿ ನೌಕರರ ಬಾಕಿ ವೇತನವನ್ನು ಶೀಘ್ರವಾಗಿ ಬಿಡುಗಡೆ ಮಾಡಿಸಿಕೊಡಬೇಕೆಂದು ನೌಕರರು ತೀವ್ರ ಆಶಾಭಾವನೆಯಿಂದ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
