ವಿಟ್ಲ: ಮಕ್ಕಳಲ್ಲಿ ಪ್ರತಿಭೆ, ಶಿಸ್ತು, ಸಂಸ್ಕಾರ ಮತ್ತು ಸಾಂಸ್ಕೃತಿಕ ಅಭಿರುಚಿಯನ್ನು ಬೆಳೆಸುವ ಸದುದ್ದೇಶದಿಂದ ವಿಟ್ಲ ಸ್ವರ ಸಿಂಚನ ಸಂಗೀತ ಶಾಲೆ ಹಾಗೂ ಪಡಿಬಾಗಿಲು ಶಾಖೆಯ ವಿದ್ಯಾರ್ಥಿಗಳ ಸಂಯುಕ್ತ ಆಶ್ರಯದಲ್ಲಿ ‘ಸ್ವರ ಸಿಂಚನ ಸಂಗೀತೋತ್ಸವ–2026’ ಕಾರ್ಯಕ್ರಮವು ವಿಟ್ಲ ಶ್ರೀ ಭಗವತಿ ದೇವಸ್ಥಾನದ ಸಿಂಹಾಸನದ ವಿಶೇಷ ಪೂಜಾ ಮಂಟಪದಲ್ಲಿ ಅತ್ಯಂತ ಭಕ್ತಿಭಾವ ಹಾಗೂ ಸಂಭ್ರಮದಿಂದ ಜರುಗಿತು.
ಕಾರ್ಯಕ್ರಮವನ್ನು ಪಶುವೈದ್ಯರಾದ ಡಾ. ಈಶ್ವರ ಭಟ್ ಕಾಶಿಮಠ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ಸಾಂಸ್ಕೃತಿಕ ಸಮಾರಂಭದ ಪ್ರಮುಖ ಘಟ್ಟವಾಗಿ ಡಾ. ಈಶ್ವರ ಭಟ್ ದಂಪತಿಗೆ ‘ಸ್ವರ ಸಿಂಚನ ಪುರಸ್ಕಾರ–2026’ ನೀಡಿ ಗೌರವಿಸಲಾಯಿತು.
ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಡಾ. ಈಶ್ವರ ಭಟ್ ಅವರು, ಸಂಗೀತಾಭ್ಯಾಸದಲ್ಲಿ ನಿರತರಾಗಿರುವ ವಿದ್ಯಾರ್ಥಿಗಳನ್ನು ಶ್ಲಾಘಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗೈಯುವಂತೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಶ್ರೀ ಭಗವತಿ ದೇವಸ್ಥಾನ ವಿಟ್ಲದ ವ್ಯವಸ್ಥಾಪಕ ಕೇಶವ ಆರ್.ವಿ., ವಯಲಿನ್ ವಾದಕ ಪ್ರಭಾಕರ ಕುಂಜಾರು, ಮೃದಂಗ ವಾದಕ ಡಾ. ಬಿ.ಆರ್. ನಾರಾಯಣ ಪ್ರಕಾಶ್, ಪ್ರಮುಖರಾದ ರವಿಶಂಕರ್ ಸಿ. ಮೂಡಂಬೈಲು, ಗೋಪಾಲಕೃಷ್ಣ ನಾಯಕ್ (ಪಡಿಬಾಗಿಲು) ಹಾಗೂ ಸಂಗೀತ ಶಿಕ್ಷಕಿ ಸವಿತಾ ಕೋಡಂದೂರು ಉಪಸ್ಥಿತರಿದ್ದರು.
ಕೇಶವ ಆರ್.ವಿ. ಅವರು ಮಾತನಾಡಿ, ಸಂಗೀತ ಶಿಕ್ಷಣದ ಮಹತ್ವ ಮತ್ತು ವಿದ್ಯಾರ್ಥಿಗಳ ಪ್ರತಿರೂಪವನ್ನು ತಿದ್ದುವಲ್ಲಿ ಗುರುಗಳ ಪಾತ್ರ ಹಿರಿದಾದದ್ದು ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಿಂದ ಸಂಗೀತ ರಸದೌತಣ:
ಸಭಾ ಕಾರ್ಯಕ್ರಮದ ಬಳಿಕ ಸ್ವರ ಸಿಂಚನ ಸಂಗೀತ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ವೈವಿಧ್ಯಮಯ ಸಂಗೀತ ಪ್ರಸ್ತುತಿಗಳು ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು. ವಿದ್ಯಾರ್ಥಿಗಳ ಗಾಯನಕ್ಕೆ ವಯಲಿನ್ ವಾದಕರಾದ ಪ್ರಭಾಕರ ಕುಂಜಾರು ಹಾಗೂ ಪ್ರಿಯಾ ಕೆ. ಪರಕ್ಕಜೆ, ಹಾಗೂ ಮೃದಂಗದಲ್ಲಿ ಡಾ. ಬಿ. ನಾರಾಯಣ ಪ್ರಕಾಶ್ ಅವರು ಸಾಥ್ ನೀಡಿದರು.
ವಿದ್ಯಾರ್ಥಿಗಳ ಆತ್ಮವಿಶ್ವಾಸದ ಸುಮಧುರ ಗಾಯನ ಹಾಗೂ ವಾದ್ಯ ಸಂಗೀತ ಪ್ರದರ್ಶನವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿ ಸಿಂಚನ ಲಕ್ಷ್ಮಿ ಕೋಡಂದೂರು ಪ್ರಾರ್ಥನೆ ಸಲ್ಲಿಸಿ, ಅಮೂಲ್ಯ ಅರವಿಂದ ಪ್ರಸಾದ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
