ಕೊರಟಗೆರೆ : ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕೇಂದ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದರೂ, ಸಾರಿಗೆ ಸಂಪರ್ಕದ ಕೊರತೆಯಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಅರಸಾಪುರ, ಬೈರೇನಹಳ್ಳಿ, ಅಕ್ಕಿರಾಂಪುರ, ಸೊಂಪುರ ಸೇರಿದಂತೆ ಹತ್ತಾರು ಹಳ್ಳಿಗಳಿಂದ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಹೊಳವನಹಳ್ಳಿಗೆ ಶಾಲಾ-ಕಾಲೇಜಿಗೆ ಬರುತ್ತಾರೆ. ಆದರೆ ಗೌರಿಬಿದನೂರು ಮತ್ತು ತುಮಕೂರು ಕಡೆಯಿಂದ ಬರುವ ಬಸ್ ಗಳು ಹೊಳವನಹಳ್ಳಿಗೆ ಬಾರದೆ ಗೌರಗಾನಹಳ್ಳಿ ಕ್ರಾಸ್ ನಲ್ಲಿಯೇ ಹಾದು ಹೋಗುತ್ತಿವೆ.
ಇದರಿಂದ ವಿದ್ಯಾರ್ಥಿಗಳು ಗೌರಗಾನಹಳ್ಳಿ ಕ್ರಾಸ್ ನಿಂದ ಹೊಳವನಹಳ್ಳಿವರೆಗೆ ಸುಮಾರು 5 ಕಿ.ಮೀ ಹಾಗೂ ಸೋಂಪುರ ಗ್ರಾಮದಿಂದ 3 ಕಿ.ಮೀ ದೂರ ನಡೆದುಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.
ಬೆಳಗ್ಗೆ ಶಾಲಾ–ಕಾಲೇಜು ಸಮಯದಲ್ಲಿ ಮತ್ತು ಸಂಜೆ ತಿರುಗಿ ಹೋಗುವ ಸಮಯದಲ್ಲಿ ಹೊಳವನಹಳ್ಳಿ ಮಾರ್ಗವಾಗಿ ಬಂದು ವಾಪಸ್ ಹೋಗುವ ವ್ಯವಸ್ಥೆ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸಾರಿಗೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹೊಳವನಹಳ್ಳಿಯಲ್ಲಿ ರಸ್ತೆ ಕೆಲಸ ನಡೆಯುತ್ತಿರುವುದರಿಂದ ಬಸ್ ಗಳು ಬರದೇ ಸುಮಾರು ಹದಿನೈದು ದಿನಗಳಿಂದ ಗೌರಗಾನಹಳ್ಳಿ ಕ್ರಾಸ್ ನಿಂದ ಹೊಳವನಹಳ್ಳಿ ಗೆ ನಾವು ನಡೆದುಕೊಂಡೇ ಶಾಲೆಗೆ ತೆರಳುತ್ತಿದ್ದೇವೆ. ಸಂಬಂಧ ಪಟ್ಟ ಅಧಿಕಾರಿಗಳು ಬಸ್ ವ್ಯವಸ್ಥೆ ಮಾಡಿದರೆ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ.
— ಭಾರ್ಗವಿ. ಹೊಳವನಹಳ್ಳಿ ಶಾಲೆಯ ವಿದ್ಯಾರ್ಥಿನಿ
ರಸ್ತೆ ಕಾಮಗಾರಿ ತಡವಾಗಿ ಮಾಡುತ್ತಿರುವುದರಿಂದ ಹೊಳವನಹಳ್ಳಿಗೆ ಬಸ್ ಗಳು ಬರದೇ ಶಾಲಾ ಮಕ್ಕಳಿಗೆ ಬಸ್ ಸಿಗದೇ ಶಾಲೆಗೆ ತಡವಾಗಿ ಬರುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಯ ಜೊತೆಗೆ ಮಾತನಾಡಿದ್ದೇನೆ ಇದಕ್ಕೆ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ. ದೂರವಾಣಿ ಮೂಲಕ ಸಂಬಂದ ಪಟ್ಟ ಇಂಜಿನಿಯರ್ ಜೊತೆ ಮಾತನಾಡಿದೆ ಆದರೆ ಅವರು ಬೇಜವಾಬ್ದಾರಿಯಾಗಿ ಮಾತನಾಡುತ್ತಿದ್ದಾರೆ.
— ಲಾಲಾನಾಯ್ಕ್. ಮುಖ್ಯ ಶಿಕ್ಷಕ ಹೊಳವನಹಳ್ಳಿ ಪ್ರೌಢಶಾಲೆ.
ಹೊಳವನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿ ವಿಳಂಬ ಆಗುತ್ತಿರುವ ಹಿನ್ನೆಲೆ ಹೊಳವನಹಳ್ಳಿ ಗೆ ಬಸ್ ಗಳು ಬಾರದಿರುವುದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆ ಆಗುತ್ತಿದೆ.
ಕೊರಟಗೆರೆಯ ಗೌರಗಾನಹಳ್ಳಿ ಕ್ರಾಸ್ ಮಾರ್ಗವಾಗಿ ಹೊಳವನಹಳ್ಳಿ ಗೆ ಬರುತ್ತಿದ್ದ ಬಸ್ ಗಳು ಮಾರ್ಗ ಬದಲಿಸಿ ಗೌರಗಾನಹಳ್ಳಿ, ಕತ್ತಿನಾಗೇನಹಳ್ಳಿ, ಅಕ್ಕಿರಾಂಪುರದ ಮೂಲಕ ಸಂಚರಿಸುತ್ತಿವೆ.. ಇದರಿಂದ ಸಾರ್ವಜನಿಕರಿಗೆ, ವೃದ್ಧರಿಗೆ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸಿಗದೇ ಮತ್ತು ಹೊಳವನಹಳ್ಳಿಗೆ ಬಸ್ ಬಾರದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
