ಬೆಂಗಳೂರು: ರಾಜ್ಯದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಜಾರಿ ಮಾಡ್ಯೂಲ್ (ED) ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ. ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಮತ್ತು ಭ್ರಷ್ಟಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಸತೀಶ್ ಜಾರಕಿಹೊಳಿ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಿಢೀರ್ ದಾಳಿ ನಡೆಸಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಬೆಂಗಳೂರು, ಬೆಳಗಾವಿ ಮತ್ತು ಮಹಾರಾಷ್ಟ್ರ ಸೇರಿದಂತೆ ಒಟ್ಟು 15ಕ್ಕೂ ಹೆಚ್ಚು ಕಡೆಗಳಲ್ಲಿ ಇಡಿ ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿ ತನಿಖೆ ಮುಂದುವರಿಸಿದೆ.
ವರದಿಗಳ ಪ್ರಕಾರ, ಸಚಿವರಾಗಿದ್ದ ವೇಳೆ ಪ್ರಭಾವ ಬಳಸಿ 18 ಅನಧಿಕೃತ ಬಾರ್ ಲೈಸೆನ್ಸ್ ಗಳನ್ನು ನೀಡಲು ಸಹಾಯ ಮಾಡಿದ್ದರೆಂಬ ಗಂಭೀರ ಆರೋಪವಿದೆ. ವಿದೇಶದಲ್ಲಿ ಹಣ ಹೂಡಿಕೆ ಮಾಡಲು ಜಾರಕಿಹೊಳಿ ಸಹಾಯ ಮಾಡಿದ್ದ ಆರೋಪವಿದ್ದು, ಈ ಹಿಂದೆ ಸುಮಾರು 3 ಕೋಟಿ ರೂ.ಗಳಷ್ಟು ಅಕ್ರಮ ವಿದೇಶಿ ಹಣ ಪತ್ತೆಯಾಗಿತ್ತು. ಬಾರ್ ಗಳಿಂದ ಅಕ್ರಮ ಹಣ ವರ್ಗಾವಣೆ (Hawala transaction) ನಡೆದಿರುವ ಶಂಕೆಯ ಮೇರೆಗೆ ಈ ದಾಳಿ ನಡೆದಿದೆ ಎನ್ನಲಾಗಿದೆ.
ಇಂದು ಬೆಳಿಗ್ಗೆಯೇ ಎರಡು ಪ್ರತ್ಯೇಕ ಕಾರುಗಳಲ್ಲಿ ಆಗಮಿಸಿದ ಇಡಿ ಅಧಿಕಾರಿಗಳ ತಂಡವು ಸಚಿವರ ಮನೆಯನ್ನು ಪ್ರವೇಶಿಸಿ, ಅಲ್ಲಿರುವ ಪ್ರಮುಖ ದಾಖಲೆಗಳು, ಆಸ್ತಿ ಪತ್ರಗಳು ಮತ್ತು ಬ್ಯಾಂಕ್ ಖಾತೆಗಳ ವಿವರಗಳನ್ನು ತೀವ್ರ ತನಿಖೆಗೆ ಒಳಪಡಿಸಿದೆ. ಸಚಿವರ ಮನೆಯ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ.
ಕಳೆದ ಜೂನ್ ತಿಂಗಳಲ್ಲಿ ಸತೀಶ್ ಜಾರಕಿಹೊಳಿ ಅವರ ಆಪ್ತ ಸಂಬಂಧಿ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಯಾಗಿದ್ದ ವೈ. ಮಂಜುನಾಥ್ ನಿವಾಸದ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು ಎಂಬುದು ಇಲ್ಲಿ ಗಮನಾರ್ಹ. ಪ್ರಸ್ತುತ ನಡೆಯುತ್ತಿರುವ ಈ ಮುಂದುವರಿದ ತನಿಖೆಯು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
