ತುರುವೇಕೆರೆ: ಮುಖ್ಯಮಂತ್ರಿ ಅನುದಾನದ ಬಿಡುಗಡೆಯಾದ 25 ಕೋಟಿ ರೂ. ವೆಚ್ಚದ ಕಾಮಗಾರಿಗಳ ಬಗ್ಗೆ ಸೂಕ್ತ ತನಿಖೆಯಾಗಬೇಕು ಹಾಗೂ ನನೆಗುದಿಗೆ ಬಿದ್ದಿರುವ ಪಟ್ಟಣದ ವಾಣಿಜ್ಯ ಸಂಕೀರ್ಣವನ್ನು ಶೀಘ್ರವೇ ಪ್ರಾರಂಭಿಸಬೇಕೆಂದು ಒತ್ತಾಯಿಸಿ ಸೋಮವಾರ ಪಟ್ಟಣದ ರಾಘವೇಂದ್ರ ಹೋಟೆಲ್ ಮುಂಭಾಗ ಕಾಂಗ್ರೆಸ್ ಮುಖಂಡ ಹಾಗೂ ಬೆಸ್ಕಾಂ ಮಾಜಿ ನಿರ್ದೇಶಕ ಬಿ.ಎಸ್. ವಸಂತ್ ಕುಮಾರ್, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರೊಡಗೂಡಿ ಉಪವಾಸ ಸತ್ಯಾಗ್ರಹ ನಡೆಸಿದರು.
ಬಿ.ಎಸ್. ವಸಂತ್ ಕುಮಾರ್ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಶ್ರೀ ಉಡುಸಲಮ್ಮ ದೇವಾಲಯದ ಹಿಂಭಾಗದಲ್ಲಿನ ಕೆರೆ ಒತ್ತುವರಿಯಾಗಿದೆ ಎಂದು ಕೇಳಿ ಬರುತ್ತಿದ್ದು, ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ತನಿಖೆ ಮಾಡಿಸಿ, ಒತ್ತುವರಿ ಸಾಬೀತಾದಲ್ಲಿ ಒತ್ತುವರಿಯನ್ನು ತೆರವುಗೊಳಿಸಬೇಕು. ಕಾಮಗಾರಿ ಮಾಡಿರುವವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಇಷ್ಟೆಲ್ಲಾ ಕಾಮಗಾರಿಗಳ ಕುರಿತು 2 ಬಾರಿ ಪತ್ರಿಕಾ ಗೋಷ್ಠಿ ನಡೆಸಿದರೂ ಸಹ, ಶಾಸಕರು ಯಾಕೆ ಮೌನ ವಹಿಸಿದ್ದಾರೆ? ಇದು ನಿಮ್ಮ ಜವಾಬ್ದಾರಿಯಲ್ಲವೇ? ಬಿಲ್ ಮಾಡುವುದಲಿ ಅಧಿಕಾರಿಗಳಿಗೆ ಬದ್ಧತೆಯಿರಬೇಕು. ಈಗಲೂ ಕಾಲ ಮಿಂಚಿಲ್ಲ ಶಾಸಕರೆ, ತಾವು ದಯಮಾಡಿ ತಾಲೂಕಿನ ಕಾಮಗಾರಿಗಳ ಬಗ್ಗೆ ಬದ್ಧತೆ ತೋರಿಸಿ, ಕಳಪೆ ಕಾಮಗಾರಿ ಬಗ್ಗೆ ಯಾವುದೇ ಪಕ್ಷದವರೇ ಆಗಲಿ ಕ್ರಮ ಕೈಗೊಳ್ಳಿ, ಇದರಿಂದ ಮುಂದೆ ಇಂತಹ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದರು.
ಕೆಪಿಸಿಸಿ ಸದಸ್ಯ ಸುಬ್ರಹ್ಮಣ್ಯ ಶ್ರೀಕಂಠೇಗೌಡ ಮಾತನಾಡಿ, ಪಟ್ಟಣದ ಅಭಿವೃದ್ಧಿ ಮರಿಚಿಕೆಯಾಗಿದೆ. ತಾಲೂಕು ಕಚೇರಿ ಬಾಗಿಲಲ್ಲಿ ಬೈಕುಗಳ ಪಾರ್ಕಿಂಗ್ ಹಾಗೂ ರಸ್ತೆ ಬದಿಯಲ್ಲೇ ಬೀದಿ ಬದಿ ವ್ಯಾಪಾರದಿಂದ ಜನಸಾಮಾನ್ಯರಿಗೆ ರಸ್ತೆ ಸುರಕ್ಷತೆಯಿಲ್ಲದಂತಾಗಿದೆ. ಕಾನೂನು ಕ್ರಮ ಜರುಗಿಸುವಲ್ಲಿ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ. ಮುಂದಿನ ಚುನಾವಣೆಯಲ್ಲಿ ತಾಲೂಕಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತಂದು, ನಾವು ಕೆಲಸ ಮಾಡಿ ತೋರಿಸುತ್ತೇವೆ ಎಂದು ಸವಾಲೆಸೆದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಳ್ಳಾಲ ನಾಗರಾಜು, ಪ.ಪಂ. ಮಾಜಿ ಅಧ್ಯಕ್ಷ ಟಿ.ಎನ್.ಶಶಿಕುಂದರ್ ಹಾಗೂ ಟಿ.ಎನ್. ಶಿವರಾಜು, ಮಾಜಿ ಸದಸ್ಯ ಯಜಮಾನ ಮಹೇಶ್, ಗುಡ್ಡೆನಹಳ್ಳಿ ಸಂಜುಂಡಪ್ಪ, ಕೊಂಡಜ್ಜಿ ಕುಮಾರ್, ಜೇವಿನಹಳ್ಳಿ ಬಸವರಾಜು, ಗವಿರಂಗಯ್ಯ, ಕಲ್ಲಲ್ಲಿ ಬಸವರಾಜು, ವಿನಯ್, ರಂಗಸ್ವಾಮಿ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪಟ್ಟಣದ ವಾಣಿಜ್ಯ ಸಂಕೀರ್ಣ ಉದ್ಘಾಟನೆ ಹಾಗೂ ಕೆ.ಆರ್.ಐ.ಡಿ.ಎಲ್ ಅಡಿ 25 ಕೋಟಿ ರೂ. ವೆಚ್ಚದ ಸುಮಾರು 84 ಕಾಮಗಾರಿಗಳಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಪ್ರತಿಷ್ಠಿತ ಸಂಸ್ಥೆಯಿಂದ ತನಿಖೆಗೆ ನೇಮಕ ಮಾಡಬೇಕು. ತಾಲೂಕಿನ ಅಧಿಕಾರಿಗಳ ಬಗ್ಗೆ ನಮಗೆ ನಂಬಿಕೆಯಿಲ್ಲದ ಕಾರಣ ಜಿಲ್ಲಾಧಿಕಾರಿಗಳಿಗೆ 10 ದಿನದ ಗಡುವು ನೀಡುತ್ತಿದ್ದು, ಅಷ್ಟರೊಳಗೆ ಪ್ರತಿಷ್ಠಿತ ಸಂಸ್ಥೆಯಿಂದ ತನಿಖೆಗೆ ಆದೇಶ ನೀಡಬೇಕು. ಸುಮಾರು 17 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಗೊಂಡ ಒಳಚರಂಡಿ ಕಾಮಗಾರಿಯಿಂದ ಇದುವರೆವಿಗೂ ನಾಗರಿಕರಿಗೆ ಮುಕ್ತಿ ಸಿಕ್ಕಿಲ್ಲ, ಅದರ ಬಗ್ಗೆಯೂ ತನಿಖೆಯಾಗಬೇಕು.
— ಬಿ.ಎಸ್. ವಸಂತ್ ಕುಮಾರ್, ಕಾಂಗ್ರೆಸ್ ಮುಖಂಡರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
