ತುರುವೇಕೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ತುರುವೇಕೆರೆ ಗ್ರಾಮಾಂತರ ಯೋಜನಾ ಕಚೇರಿ ವ್ಯಾಪ್ತಿಯ ಬ್ಯಾಲಹಳ್ಳಿ ಕೆರೆ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಹೂಳೆತ್ತುವ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.
ತುಮಕೂರು 1 ಜಿಲ್ಲಾ ನಿರ್ದೇಶಕರು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಜನ ಸೇವೆಯೇ ಮಂಜುನಾಥ ಸ್ವಾಮಿಯ ಸೇವೆ ಎಂದು ಅರಿತು ಜನಸೇವಾ ನಿರತರಾಗಿದ್ದಾರೆ ಎಂದರಲ್ಲದೆ, ಕೆರೆಯ ಹೂಳೆತ್ತುವ ಕಾರ್ಯಕ್ಕೆ ಗ್ರಾಮಸ್ಥರ ಸಹಕಾರ ಅತ್ಯಗತ್ಯವೆಂದರು.
ಕೆರೆ ಸಮಿತಿ ಅಧ್ಯಕ್ಷ ಸತೀಶ್ ಮಾತನಾಡಿ, ಪೂಜ್ಯರು ನಮ್ಮ ಊರಿನ ಕೆರೆ ಅಭಿವೃದ್ಧಿಗೆ ಅನುದಾನ ನೀಡಿದ್ದು ಊರಿನ ಪ್ರತಿಯೊಬ್ಬರೂ ಈ ಕಾರ್ಯಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತುರುವೇಕೆರೆ ಗ್ರಾಮಾಂತರ ಯೋಜನಾಧಿಕಾರಿ ಶಬೀರ್ ಶೇಖ್, ಕೆರೆ ಕಾಮಗಾರಿ ನಿರ್ವಹಣೆಯ ಮೇಲ್ವಿಚಾರಣೆಯ ತಾಲೂಕು ವೀಕ್ಷಣಾಧಿಕಾರಿ ಗೋವರ್ಧನ್, ವಲಯ ಮೇಲ್ವಿಚಾರಕ ಶ್ರೀಕಾಂತ್, ಒಕ್ಕೂಟದ ಅಧ್ಯಕ್ಷ ಭಾರತಿ, ಸೇವಾಪ್ರತಿನಿಧಿ ರಂಜಿತಾ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಕಳೆದ 10 ವರ್ಷಗಳಿಂದ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ರಾಜ್ಯದ ಸುಮಾರು 1000 ಕ್ಕೂ ಮಿಕ್ಕಿ ಕೆರೆ ಹೂಳೆತ್ತಲಾಗಿದೆ. ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹಾಲಿನ ಡೇರಿ ಕಟ್ಟಡ, ಶಾಲೆಗಳಿಗೆ ಬೆಂಚು, ಡೆಸ್ಕ್, ಶಾಲೆಗೆ ಜ್ಞಾನ ದೀಪ, ಶಿಕ್ಷಕರ ನೇಮಕಾತಿ, ಸ್ವಸಹಾಯ ಸಂಘದ ಸದಸ್ಯರ ಮಕ್ಕಳ ವೃತ್ತಿಪರ ಶಿಕ್ಷಣಕ್ಕೆ ಪ್ರತಿ ತಿಂಗಳು ರೂ. 400 ರಿಂದ 1000 ವರೆಗೆ ಸುಜ್ಞಾನ ನಿಧಿ ಶಿಷ್ಯ ವೇತನ ನೀಡಲಾಗುತ್ತಿದೆ. ವಾತ್ಸಲ್ಯ ಕಾರ್ಯಕ್ರಮದಡಿ ನಿರ್ಗತಿಕ ಸದಸ್ಯರಿಗೆ ಪ್ರತಿ ತಿಂಗಳು ಮಾಸಾಶನ, ಸೂರು ಇಲ್ಲದ ಸದಸ್ಯರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುತ್ತಿದೆ ಎಂದು ತುಮಕೂರು 1 ಜಿಲ್ಲಾ ನಿರ್ದೇಶಕರು, ಧರ್ಮಸ್ಥಳ ಯೋಜನೆ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
